

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರ ಸಂಘವನ್ನು ಸಾಲದ ಸುಳಿಯಿಂದ ಪಾರು ಮಾಡಿ ರೈತರ ಅನುಗುಣವಾಗಿ ಕೆಲಸ ಮಾಡುತ್ತೇವೆ. ರೈತರ ಹಿತರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಭಾನುವಾರ ಹುಕ್ಕೇರಿ ತಾಲ್ಲೂಕು ವಿದ್ಯುತ್ ಸಹಕಾರ ಸಂಘದ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಆರ್ಥಿಕ ನಷ್ಟದಲ್ಲಿರುವ ಸಹಕಾರ ಸಂಸ್ಥೆಗಳನ್ನು ಉಳಿಸಿ ಬೆಳೆಸಬೇಕಾಗಿದೆ. ರೈತರಿಗೆ ಪಾರದರ್ಶಕ ಆಡಳಿತ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸೆ. 28 ರಂದು ನಡೆಯುವ ತಾಲ್ಲೂಕು ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ತಮ್ಮ ನೇತೃತ್ವದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ವಿನಂತಿಸಿದರು.
ಹುಕ್ಕೇರಿ ತಾಲ್ಲೂಕಿನಲ್ಲಿ ಕಳೆದ ಆರು ತಿಂಗಳಿನಿಂದ ಸಹಕಾರ ಪರ್ವದ ಮೂಲಕ ಹೊಸ ಶಕೆ ಆರಂಭವಾಗಿದೆ. ರೈತರ ಹಿತದೃಷ್ಟಿಯಿಂದ ನಾವೆಲ್ಲರೂ ಕೂಡಿಕೊಂಡು ಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿದ್ದು, ಇದರಲ್ಲಿ ನಾವು ಹೊರಗಿನವರು ಎಂಬುದನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೀಗೆ ವಿವಿಧ ನಾಯಕರು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
ಹುಕ್ಕೇರಿ ತಾಲೂಕಿನ ಸಹಕಾರ ಸಂಘಗಳ ಪ್ರಮುಖರು ನನ್ನ ಬಳಿಗೆ ಬಂದು ಸಂಸ್ಥೆಗಳನ್ನು ಉಳಿಸಿಕೊಳ್ಳುವಂತೆ ಕೋರಿಕೊಂಡರು. ಹೀಗಾಗಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ಆರ್ಥಿಕ ನೆರವು ನೀಡಿದೇವು. ಇದರಿಂದ ಕಾರ್ಮಿಕರು, ರೈತರಿಗೆ ಒಳ್ಳೆಯದು ಆಗಲಿದೆ. ಕಬ್ಬು ಪೂರೈಕೆ ಮಾಡುವ ರೈತರಿಗೆ ಕೇವಲ 15 ದಿನದೊಳಗೆ ಬಿಲ್ ಸಂದಾಯ ಮಾಡುತ್ತೇವೆ. ಕಾರ್ಮಿಕರ ಮತ್ತು ರೈತರ ಹಿತ ಕಾಪಾಡುವ ಕೆಲಸವು ನಮ್ಮದಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಸಹಕಾರ ಸಂಘಗಳ ಚುನಾವಣೆಯಲ್ಲಿ ನಮ್ಮ ವಿರೋಧಿ ಬಣವು ಪ್ರತಿ ಗ್ರಾಮಗಳಲ್ಲಿ ಮತದಾರರಿಂದ ಸಾಮೂಹಿಕ ಪ್ರತಿಜ್ಞೆ ಮಾಡಿಸುತ್ತಿರುವುದು ಸರಿಯಲ್ಲ. ಉತ್ತಮ ಆಡಳಿತಕ್ಕಾಗಿ, ಈ ಹಿಂದಿನ ಸರ್ವಾಧಿಕಾರಿ ಆಡಳಿತವನ್ನು ಕೊನೆ ಮಾಡಿ ನಮ್ಮ ಪೆನಲನ್ನು ಹರಿಸುವಂತೆ ಅವರು ಕೋರಿದರು.
ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಹೀರಾ ಶುಗರ್‌ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಅಶೋಕ ಅಂಕಲಿ, ಅಶೋಕ ಪಟ್ಟಣಶೆಟ್ಟಿ, ಪರಗೌಡ ಪಾಟೀಲ, ರವಿ ಹಿಡಕಲ್, ಬಸವರಾಜ ಪಾಟೀಲ, ಶಿವನಾಯಿಕ ನಾಯಿಕ, ಬಸವರಾಜ ಮಟಗಾರ ಇತರರಿದ್ದರು.
..........................
ಕೋಟ್ಸ್
ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ನೇತೃತ್ವದಲ್ಲಿ ದಿ. ಅಪ್ಪಣ್ಣಗೌಡ ಪಾಟೀಲರ ಹೆಸರಿನಲ್ಲಿ ಪೆನಲ್ ರಚಿಸಲಾಗಿದೆ. ಪ್ರಬುದ್ಧ ಮತದಾರರು ದಕ್ಷ ಆಡಳಿತಕ್ಕಾಗಿ ನಮ್ಮ ಪೆನಲಿನ ಎಲ್ಲ ಅಭ್ಯರ್ಥಿಗಳಿಗೆ ಅಮೂಲ್ಯವಾದ ಮತಗಳನ್ನು ನೀಡಿ ಆಶೀರ್ವಾದ ಮಾಡಬೇಕು. ರೈತರ ಸೇವೆಗಾಗಿ ನಾವು ಕಟಿಬದ್ದರಾಗಿದ್ದೇವೆ. ರೈತರ ಬೆಂಬಲ, ಪ್ರೋತ್ಸಾಹ ನಮಗೆ ಮುಖ್ಯವಾಗಿದೆ.
-ಬಾಲಚಂದ್ರ ಜಾರಕಿಹೊಳಿ, ಶಾಸಕ, ಬೆಮುಲ್ ಅಧ್ಯಕ್ಷ
...........