ರೈತರ, ಬಡವರ ಬದುಕು ಕಿತ್ತುಕೊಂಡ ಕಾಂಗ್ರೆಸ್; ಬಾಲಚಂದ್ರ ಜಾರಕಿಹೊಳಿ ಟೀಕೆ

IMG-20250521-WA0009.jpg
Published on

- ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾಳಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರ ರೈತರ, ಬಡವರ ಬದುಕಿನ ಮೇಲೆ ಬರೆ ಎಳೆದಿದೆ. ಅಲ್ಲದೆ, ಬಡವರು ಸೇವಿಸುವ ಹಾಲು ಹಾಗೂ ಮದ್ಯದ ದರ ಕುಇಡ ಏರಿಕೆ ಮಾಡಿದೆ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿದ್ದರು ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಏರಿಕೆ ಮಾಡಿರಲಿಲ್ಲ. ಇದೀಗ ಗ್ಯಾರಂಟಿ ಯೋಜನೆಗಳಿಗಾಗಿ ಕುಡಿಯುವ ನೀರು, ಹಾಲು, ಮದ್ಯ ಸೇರಿ ಎಲ್ಲ ಅಗತ್ಯವಸ್ತುಗಳ ಬೆಲೆ ಹೆಚ್ಚಿಸಿದೆ. ತಿಂಗಳಿಗೆ ಎರಡು ಸಾವಿರ ರೂ. ಕೊಟ್ಟಂತೆ ಮಾಡಿ ಮತ್ತೊಂದೆಡೆ ನಾಲ್ಕು ಪಟ್ಟು ವಸೂಲಿ ಮಾಡುತ್ತಿದೆ ಎಂದು ಟೀಕಿಸಿದರು.

ಈ ಮೊದಲು ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು, ತುರ್ತು ಕಾಮಗಾರಿಗಳಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಲಕ್ಷ ರೂ. ನೀಡುತ್ತಿದ್ದವು.ಆದರೆ, ಈಗಿನ ಕಾಂಗ್ರೆಸ್ ಕುಡಿಯುವ ನೀರಿಗೆ 5 ಲಕ್ಷ ರೂ. ನೀಡಲಿಲ್ಲ. ಇಂತಹ ಸರ್ಕಾರದಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳದಂತಹ ಸ್ಥೀತಿ ನಿರ್ಮಾಣಗೊಂಡಿದೆ.

ಮುಂಬರುವ ದಿನಗಳಲ್ಲಿ ರಾಜ್ಯ ಕಾಂಗ್ರೆಸ ಸರ್ಕಾರದ ವಿರುದ್ಧ ಬಿಜೆಪಿ ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ. ಸರ್ಕಾರದ ಪ್ರತಿಯೊಂದು ವೈಫಲ್ಯಗಳನ್ನು ಜನರ ಮುಂದಿಡುವ ಕೆಲಸವನ್ನು ಬಿಜೆಪಿ ಮಾಡಲಿದೆ. ನಾವೆಲ್ಲಾ ನಾಯಕರು ಒಂದಾಗಿದ್ದು, ಒಗ್ಗಟ್ಟಿನಿಂದಲೇ ಹೋರಾಟಗಳನ್ನು ನಡೆಸುತ್ತೇವೆ. ಪಕ್ಷದಲ್ಲಿ ಕೆಲ ಸಣ್ಣಪುಟ್ಟ ವಿಷಯಗಳಿರುವುದು ಸಾಮಾನ್ಯ. ಅವುಗಳನ್ನು ನಮ್ಮ ನಾಯಕರು ಪರಿಹರಿಸುತ್ತಾರೆ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರಿಂದ ಹಣ ವಸೂಲಿ ಮಾಡುವುದೇ ದೊಡ್ಡ ಸಾಧನೆ ಮಾಡಿಕೊಂಡಿದೆ. ನೋಂದಣಿ ಶುಲ್ಕ ಶೇ.150ರಷ್ಟು, ಜನನ, ಮರಣ ಪ್ರಮಾಣ ಶುಲ್ಕ ಶೇ.100 ರಷ್ಟು ಹೆಚ್ಚಳ ಮಾಡಿದೆ. ಜನರಿಗೆ ಬೇಕಾಗುವ ಅಗತ್ಯ ವಸ್ತುಗಳ ಮೇಲಿನ ದರ ಹೆಚ್ಚಿಸಿ ಸಂಕಷ್ಟಕ್ಕೆ ತಳ್ಳಿದೆ. ಇಲ್ಲಿಯವರೆಗೆ ಯಾವುದೇ ಸರ್ಕಾರ ಇಷ್ಟೊಂದು ತೆರಿಗೆ ಹೆಚ್ಚಳ ಮಾಡಿರಲಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇಂತಹ ಸರ್ಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟಗಳನ್ನು ನಡೆಸಲಿದೆ. ಮುಂದಿನ ದಿನಗಳಲ್ಲಿ ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯದ ಜನರಿಗೆ ಶಾಪವಾದ ಕಾಂಗ್ರೆಸ್ ವಸೂಲಿ ಸರ್ಕಾರ ಸಂಪಾದನೆ ಸಮಾವೇಶ ಮಾಡಿಕೊಂಡಿದೆ. ಗ್ಯಾರಂಟಿ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಂತಿಬಸ್ತವಾಡ ಗ್ರಾಮದಲ್ಲಿ ಇಸ್ಲಾಂ ಧರ್ಮ ಗ್ರಂಥ ಸುಟ್ಟ ಪ್ರಕರನವನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸಬಹುದಾಗಿತ್ತು.ಆದರೆ, ಜನರ ಮಧ್ಯ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದೀಗ ಅಮಾಯಕ ದಲಿತ, ಮರಾಠಿ ಯುವಕರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ದೂರಿದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net