ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡಿಗೆ ಇಂದು

saksham
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾರ್ನಿಯಾ ಅಂಧತ್ವಮುಕ್ತ ಭಾರತ ಅಭಿಯಾನದ ಅಂಗವಾಗಿ ಕಾರ್ನಿಯಾ ಅಂಧತ್ವ ಹಾಗೂ ನೇತ್ರದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೆ. 3ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡಿಗೆ (ಬ್ಲೈಂಡ್ ಫೋಲ್ಡೆಡ್ ವಾಕ್​ಥಾನ್) ಆಯೋಜಿಸಲಾಗಿದೆ ಎಂದು ಸಕ್ಷಮ ಉತ್ತರ ಕರ್ನಾಟಕ ಪ್ರಾಂತದ ಅಧ್ಯಕ್ಷ ಡಾ. ಸುನೀಲ ಗೋಖಲೆ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಕ್​ಥಾನ್ ಬಿವಿಬಿ ಕಾಲೇಜ್​ನಿಂದ ಆರಂಭಗೊಂಡು ಕೆಎಂಸಿ ಆವರಣದವರೆಗೆ ನಡೆಯಲಿದೆ. ನಗರದ ಅಂಧರ ಶಾಲೆಯ ವಿದ್ಯಾರ್ಥಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜ್ ವಿದ್ಯಾರ್ಥಿಗಳು ಸೇರಿ ಸುಮಾರು 450 ಜನ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬಳಿಕ ಬೆಳಗ್ಗೆ 11 ಗಂಟೆಗೆ ಕೆಎಂಸಿಆರ್​ಐ ಸಭಾಂಗಣದಲ್ಲಿ ಮುಕ್ತಾಯ ಸಮಾರಂಭ ನಡೆಯಲಿದ್ದು, ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಬಸವರಾಜ ಅನಾಮಿ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ., ಕುಷ್ಮಾ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಅಭಿಷೇಕ ಪಾಟೀಲ, ಸನಾ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್​ನ ಮ್ಯಾನೇಜಿಂಗ್ ಟ್ರಸ್ಟಿ ಅಶ್ರಫ್ ಅಲಿ ಬಶೀರ್ ಅಹ್ಮದ್, ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ. ವೀರೇಶ ತೊಪಲಕಟ್ಟಿ, ಸಹ ಕಾರ್ಯದರ್ಶಿ ಡಾ. ನಾಗಲಿಂಗ ಮುರಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net