ಕರ್ನಾಟಕ ಎ ತಂಡ ಚಾಂಪಿಯನ್: ಮಂಡ್ಯ ನಗರದಲ್ಲಿ ನಡೆದ ಅಂಧರ ಕ್ರಿಕೆಟ್ ಟೂರ್ನಿ

05_01_Mdy_05(Blind Cricket)
Published on

ಮಂಡ್ಯ: ನಗರದ ಪಿಇಟಿ ಕ್ರೀಡಾಂಗಣದಲ್ಲಿ ನಡೆದ ಮೂರು ದಿನದ ರಾಜ್ಯಮಟ್ಟದ ಕರ್ನಾಟಕ ಚಾಲೆಂಜರ್ಸ್ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಎ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಕರ್ನಾಟಕ ಅಂಧರ ಕ್ರಿಕೆಟ್ ಮಂಡಳಿ(ಕೆಸಿಎಬಿ) ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯ ಫೈನಲ್ ಪಂದ್ಯ ಬುಧವಾರ ನಡೆಯಿತು. 30 ರನ್‌ಗಳಿಂದ ಸೋಲಿಸಿ ಕರ್ನಾಟಕ ಎ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಕರ್ನಾಟಕ ಸಿ ತಂಡ ರನ್ನರ್ ಅಫ್ ಪ್ರಶಸ್ತಿ ಪಡೆದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಸಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಎ ತಂಡ ಕಿರಣ್(89 ರನ್, 48ಬಾಲ್, 14 ಬೌಂಡರಿ) ಹಾಗೂ ಸಾಯಿಕೃಷ್ಣ (64 ರನ್, 49 ಬಾಲ್, 9 ಬೌಂಡರಿ) ಭರ್ಜರಿ ಬ್ಯಾಟಿಂಗ್‌ನಿಂದಾಗಿ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 188 ರನ್ ಕಲೆ ಹಾಕಿದರು. ಗುರಿ ಬೆನ್ನತ್ತಿದ ಸಿ ತಂಡ 15 ಒವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲ್ಲಷ್ಟೇ ಶಕ್ತವಾಯಿತು.

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಟ್ರೋಪಿ ವಿತರಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ನಳಿನಿಕುಮಾರಿ, ಅಂಗವಿಕಲರಲ್ಲಿ ಸಾಮಾನ್ಯ ಮನುಷ್ಯನಿಗಿಂತ ವಿಶಿಷ್ಟವಾದ ಶಕ್ತಿ ಇರುತ್ತದೆ. ಆದರೆ, ಅದರ ಅರಿವು ಅವರಿಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜ ಮತ್ತು ಪಾಲಕರು ಅವರಲ್ಲಿರುವ ವಿಶಿಷ್ಟ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಎಂದು ಕರೆ ನೀಡಿದರು.

ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ರೋಹಿತ್, ವಕೀಲರ ಸಂಘದ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ಮರಿಸ್ವಾಮಿ, ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ರಂಗಸ್ವಾಮಿ, ವಿಕಸನ ಸಂಸ್ಥೆಯ ಮಹೇಶ ಚಂದ್ರಗುರು, ಕರ್ನಾಟಕ ಅಂಧರ ಕ್ರಿಕೆಟ್ ಮಂಡಳಿಯ(ಕೆಸಿಎಬಿ) ಕಾರ್ಯದರ್ಶಿ ನೇತ್ರರಾಜು, ಕೆಸಿಎಬಿ ಸದಸ್ಯ ಸತೀಶ್, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಅಧಿಕಾರಿ ಶಿವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net