ಅಂಧರ ಚೆಸ್ ಚಾಂಪಿಯನ್‌ಷಿಪ್‌ಗೆ ಚಾಲನೆ

3 - Copy
Published on

ಮೈಸೂರು: ಹೃದಯವಂತಿಕೆಯಿಂದ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಶಾಸಕ ಎಲ್.ನಾಗೇಂದ್ರ ಸಲಹೆ ನೀಡಿದರು.
ಲರ್ನರ್ಸ್‌ ಚೆಸ್ ಕ್ಲಬ್, ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ, ಮತ್ತು ಕೆಎಸ್‌ಸಿಎವಿಸಿ ಸಹಯೋಗದಲ್ಲಿ ವಿನಾಯಕನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಅಂಧರ ಚೆಸ್ ಚಾಂಪಿಯನ್‌ಷಿಪ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.


ನಟ ಡಾ.ಪುನೀತ್ ರಾಜಕುಮಾರ್ ಅವರ ಪ್ರೇರಣೆಯಿಂದ ಅನೇಕರು ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ. ಆ ಸಂಖ್ಯೆ ಇನ್ನೂ ಹೆಚ್ಚಾಗಿ ಅಂಧರ ಬಾಳಿಗೆ ಬೆಳಕಾಗಬೇಕು ಎಂದು ಹೇಳಿದರು.
ನನಗೂ ಚದುರಂಗದಾಟ ಹೆಚ್ಚು ಇಷ್ಟ. ನಾನೂ ಆಡುತ್ತೇನೆ. ಇದು ಶಕ್ತಿಯಿಂದ ಆಡುವ ಆಟವಲ್ಲ. ಯುಕ್ತಿಯಿಂದ ಆಡುವ ಆಟ. ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲರೂ ಉತ್ತಮವಾಗಿ ಆಟವಾಡಿ ಎಂದು ಶುಭ ಹಾರೈಸಿದರು.
ನಗರ ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು ಮಾತನಾಡಿ, ಇಲ್ಲಿನ ಸ್ಪರ್ಧಿಗಳಿಗೆ ಕಣ್ಣು ಕಾಣದೆ ಇರಬಹುದು. ಮುಖದಲ್ಲಿ ಯಾವಾಗಲೂ ಸಂತೋಷವಿರುತ್ತದೆ. ಆದರೆ, ಕಣ್ಣು ಕಾಣುವ ನಮ್ಮ ಮುಖಗಳಲ್ಲಿ ಆ ಸಂತೋಷ ಕಾಣುವುದಿಲ್ಲ. ಈ ಸಂತೋಷ ಯಾವಾಗಲೂ ಇರಲಿ ಎಂದು ಹಾರೈಸಿದರು.

ಇದೊಂದು ಮಾನವೀಯ ಸ್ಪರ್ಧೆಯಾಗಿದೆ. ಕಣ್ಣು ಇದ್ದು ಕುರುಡಾಗಿರುವ ಅನೇಕರು ಹೊರಗೆ ಬಂದು ಇವರನ್ನು ಪ್ರೋತ್ಸಾಹಿಸಬೇಕು. ಎಂಥ ಸಮಸ್ಯೆ ಬಂದರೂ ಕುಗ್ಗಬಾರದು. ಸಮಾಜವನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.
ಧಾರವಾಡದ ಮನಗುಂಡಿಯ ಗುರು ಬಸವ ಮಹಾಮನೆ ಮಠದ ಬಸವಾನಂದ ಸ್ವಾಮೀಜಿ ಮಾತನಾಡಿದರು. ಒಂಟಿಕೊಪ್ಪಲು ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಸಿ.ಚೆಲುವಯ್ಯ, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ನಿರ್ದೇಶಕ ಗುರುರಾಜ್, ರಾಮು, ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ ಅಧ್ಯಕ್ಷೆ ಎಚ್.ಎಲ್.ಯಮುನಾ, ಮನು ಕೀರ್ತಿ, ಎ.ಆರ್.ರಮೇಶ್ ಇದ್ದರು. ಸ್ಪರ್ಧೆಯಲ್ಲಿ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ನ.22 ರವರೆಗೆ ಸ್ಪರ್ಧೆ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net