

ಹುಬ್ಬಳ್ಳಿ: ಇಲ್ಲಿಯ ಗೋಕುಲದ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಬ್ಲೈಂಡ್ ವಿಷುವಲ್ ಕಾರ್ (ಚಾಲಕ ರಹಿತ ವಾಹನ ಅಂಧರ ಸ್ನೇಹಿ) ರಾಷ್ಟ್ರೀಯ ಜಿಜ್ಞಾಸಾ ಸ್ಪರ್ಧೆಗೆ ಆಯ್ಕೆಯಾಗಿದೆ.
ಅತ್ಯಂತ ಸುಲಭವಾಗಿ ಸ್ವತಂತ್ರವಾಗಿ ಬಳಕೆ ಮಾಡಬಹುದಾದ ಸುರಕ್ಷಿತ ಕಾರಿನ ಮಾದರಿ ಇದಾಗಿದ್ದು, ಸೆನ್ಸಾರ್ ಬಳಸುವುದರಿಂದ ಅಂಧರಿಗೆ ಇದರಿಂದ ಹಲವು ಅನುಕೂಲಗಳಿವೆ ಎನ್ನುತ್ತಾರೆ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಾದ ವೀರೇಶಗೌಡ ಪಾಟೀಲ, ಹನುಮಂತ ಹೊಸಮನಿ ಅವರು ಎಸ್.ಬಿ. ಭಾವಿಕಟ್ಟಿ, ಮುಖ್ಯಾಧ್ಯಾಪಕಿ ಸುಷ್ಮಾ ಭಟ್ ಅವರ ಮಾರ್ಗದರ್ಶನದಲ್ಲಿ ಇದನ್ನು ತಯಾರಿಸಿದ್ದಾರೆ.
ಫೆ. 5 ಹಾಗೂ 6ರಂದು ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿ ನಡೆಯಲಿರುವ ಜಿಜ್ಞಾಸಾ ಸ್ಪರ್ಧೆಯಲ್ಲಿ ಇವರು ಕರ್ನಾಟಕದ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.