

ಲಿಂಗಸುಗೂರು: ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ತೊಗರಿ ಬೆಳೆಯ ಬೇರುಗಳು ಕೊಳೆಯುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಕಳೆದ ವರ್ಷ ಬರಗಾಲದಿಂದಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಹಾಳಾಗಿದ್ದವು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗುತ್ತಿದ್ದಂತೆ ರೈತರು ಭರದಿಂದ ಬಿತ್ತನೆ ಮಾಡಿದರು. ಜೂನ್ನಲ್ಲಿ ಉತ್ತಮ ಮಳೆ ಸುರಿಯಿತು. ಜುಲೈ ಹಾಗೂ ಆಗಸ್ಟ್ 15 ರವರೆಗೆ ಮಳೆ ಅಭಾವ ಎದುರಾಯಿತು. ಇದರಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ತೊಗರಿ, ಹತ್ತಿ, ಹೈಬ್ರಿಡ್ ಜೋಳ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ಇತರ ಬೆಳೆಗಳು ಕಳೆಗುಂದಲು ಆರಂಭಿಸಿದವು.
ಕಳೆದ ವರ್ಷ ಬರಗಾಲದಿಂದಾಗಿ ತೊಗರಿ ಬೆಲೆ ಏರಿಕೆಯಾಗಿತ್ತು. ಪ್ರಸಕ್ತ ವರ್ಷವೂ ಉತ್ತಮ ಬೆಲೆ ಸಿಗಬಹುದೆಂಬ ವಿಶ್ವಾಸದಿಂದ ತಾಲೂಕಿನಲ್ಲಿ 26,280 ಹೆಕ್ಟೇರ್ ಗುರಿ ಮೀರಿ 35,715 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಆ.16 ರಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳೆಗೆ ಸಂಕಷ್ಟ ಎದುರಾಗಿದೆ.
ಹೊನ್ನಹಳ್ಳಿ, ಯರಡೋಣಿ, ಗುರುಗುಂಟಾ, ನೀರಲಕೇರಿ, ಮಡಗಂಟನಾಳ, ಚಿತ್ರನಾಳ, ಆಶಿಹಾಳ, ಅಡವಿಬಾವಿ ಸೇರಿದಂತೆ ವಿವಿಧೆಡೆ ತೊಗರಿ ಬೆಳೆ ಜಲಾವೃತಗೊಂಡು ಬೇರುಗಳು ಕೊಳೆಯುತ್ತಿವೆ. ಬೇರುಗಳು ಪೂರೈಸಬೇಕಾದ ಪೋಷಕಾಂಶ ಪೂರೈಕೆಯಾಗದೆ ತೊಗರಿ ಬೆಳೆಗಳು ಬಾಡಿ ಹೋಗುತ್ತಿವೆ.