ವೈಜ್ಞಾನಿಕ ಸಿಪಂಡಣೆಯಿಂದ ಕೊಳೆರೋಗ ನಿಯಂತ್ರಣ

31sri-3
Published on

ಶೃಂಗೇರಿ: ತಾಲೂಕಿನಲ್ಲಿ ಅತಿವೃಷ್ಠಿಯಿಂದ ಅಡಕೆಗೆ ಕೊಳೆ ರೋಗ ಹೆಚ್ಚಾಗಿದ್ದು, ರೈತರು ಸೂಕ್ತ ನಿರ್ವಹಣೆ ಮತ್ತು ಸಕಾಲಕ್ಕೆ ಬೋರ್ಡೋ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಣ ಮಾಡಬಹುದಾಗಿದೆ ಎಂದು ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಜಯಪ್ರಕಾಶ್ ಹೇಳಿದರು.
ಆನೆಗುಂದದ ಅಡಕೆ ಸಂಶೋಧನಾ ಕೇಂದ್ರದಲ್ಲಿ ಕೃಷಿ ಇಲಾಖೆ ಮತ್ತು ಅಡಕೆ ಸಂಶೋಧನಾ ಕೇಂದ್ರ ಜಂಟಿಯಾಗಿ ಏರ್ಪಡಿಸಿದ್ದ ಅಡಕೆ ಕೊಳೆ ರೋಗ ಸಮಗ್ರ ನಿರ್ವಹಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ತೋಟದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆಯನ್ನು ಸ್ವಚ್ಛಮಾಡಬೇಕು. ಅಡಕೆ ಮರದಲ್ಲಿ ಕೊಳೆತಿರುವ ಹಿಂಗಾರವನ್ನು ತೆಗೆಯಬೇಕು. ಬೋರ್ಡೋ ದ್ರಾವಣ ಸಿದ್ಧಪಡಿಸುವಾಗ ವೈಜ್ಞಾನಿಕವಾಗಿ ತಯಾರಿಸಬೇಕು ಎಂದರು.
ತರಬೇತಿಯಲ್ಲಿ ರೈತ ಮನು ಹೆಗ್ಡೆ ಮಾತನಾಡಿ, ಸಂಶೋಧನಾ ಕೇಂದ್ರ ಆರಂಭವಾಗಿ ಅನೇಕ ವರ್ಷ ಕಳೆದಿದ್ದರೂ ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೋ ಔಷಧಿ ಇದೆ. ಆದರೆ ಐದಾರು ದಶಕದಿಂದ ಕಾಡುತ್ತಿರುವ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕೆ ರೋಗಕ್ಕೆ ಔಷಧಿ ದೊರಕದೆ ತೋಟಗಳೇ ನಾಶವಾಗುತ್ತಿದೆ. ಇದಕ್ಕೆ ಸೂಕ್ತ ಸಂಶೋಧನೆ ಆಗದೇ ರೈತರು ಸಂಕಷ್ಟದಲ್ಲಿದ್ದಾರೆ ಎಂದರು.
ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಸಂಜೀವ್ ಜಕಾತಿಮಠ್ ಮಾತನಾಡಿ, ಸಂಶೋಧನಾ ಕೇಂದ್ರ ಕಟ್ಟಡ ಮೂಲ ಸೌಕರ್ಯದ ಸಮಸ್ಯೆ ಎದುರಿಸುತ್ತಿದೆ. ಸಿಬ್ಬಂದಿ ಕೊರತೆ ಇದೆ. ಕೇಂದ್ರದಲ್ಲಿ ಸಂಶೋಧನಾ ನಡೆಸಲು ಉಪಕರಣಗಳ ಕೊರತೆ ಇದೆ. ಮಣ್ಣು ಪರೀಕ್ಷಾ ಕೇಂದ್ರದ ಸೌಲಭ್ಯವೂ ಇಲ್ಲದೇ ರೈತರು ನೀಡಿದ ಮಣ್ಣು ಮಾದರಿಯನ್ನು ಬೇರೆ ಸಂಶೋಧನಾ ಕೇಂದ್ರಕ್ಕೆ ಕಳುಹಿಸಬೇಕಾಗಿದೆ. ಜಿಕೆವಿಕೆಯಿಂದ ವಿಜ್ಞಾನಿಗಳನ್ನು ನಿಯೋಜಿಸಿದರೆ ಸಂಶೋಧನೆ ನಡೆಸುವುದು ಸಾಧ್ಯ ಎಂದರು.
ರೈತರಾದ ಬೆಳಂದೂರು ಸಾಯಿ ಪ್ರಕಾಶ್, ಕುಂಚೆಬೈಲು ನಂದೀಶ್, ಕೊಚ್ಚವಳ್ಳಿ ಅಶೋಕ್, ರತ್ನಾಕರ್, ಆದರ್ಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net