ಮಳೆ ರೂಪದಲ್ಲಿ ರಾಯರ ಆಶೀರ್ವಾದ

h23-Shobha Yatre 1
Published on

ಹುಬ್ಬಳ್ಳಿ: ಗುರು ರಾಘವೇಂದ್ರ ಶ್ರೀಗಳ ಮತ್ತು ಸೋದೆಯ ಶ್ರೀ ವಾದಿರಾಜ ಯತಿವರೇಣ್ಯರ ಭವ್ಯ ಬೃಂದಾವನವನ್ನು ಒಟ್ಟಿಗೆ ನೋಡುವ ಆಶಯ ಹುಬ್ಬಳ್ಳಿಯ ಭಕ್ತರದ್ದಾಗಿತ್ತು. ಅದು ಮಳೆಯಿಂದ ಸಾಧ್ಯವಾಗದಿದ್ದರೂ ಮುಂದೊಂದು ದಿನ ಎಲ್ಲ ಸಾಧು-ಸಂತರನ್ನು ಸೇರಿಸಿ ಮತ್ತೆ ಭವ್ಯ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದ ನೆಹರು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ತತ್ವದರ್ಶನ ಕಾರ್ಯಕ್ರಮದಲ್ಲಿ ಅವರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ಶ್ರೀ ರಾಘವೇಂದ್ರ ಯತಿಗಳ ಮತ್ತು ಶ್ರೀ ವಾದಿರಾಜ ಯತಿವರೇಣ್ಯರ ತದ್ರೂಪ ಬೃಂದಾವನವನ್ನು ನೆಹರು ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆದರೆ, ವರುಣದೇವ ಸಕಲ ಜೀವರಾಶಿಗಳಿಗೆ ಜೀವನ ಜಲಾಧಾರ ನೀಡಿದ್ದಾನೆ. ಮಳೆ ಶುಭದ ಸಂಕೇತ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಮಳೆ ರೂಪದಲ್ಲಿ ರಾಯರು ಇಡೀ ಜೀವ ಸಂಕುಲಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದರು.

ಪರಿವಾರ ದೇವರುಗಳ ವಿಶೇಷ ಆಶೀರ್ವಾದ ಸಕಲ ಜೀವಿಗಳ ಮೇಲಿರಲಿ. ದೇಶದಲ್ಲಿ ಯಾವಾಗಲೂ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಿರಲಿ ಎಂದು ಆಶೀರ್ವದಿಸಿದರು.

ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಮಾತನಾಡಿ, ಗುರುದ್ವಯರ ಬೃಂದಾವನವನ್ನು ಒಟ್ಟಿಗೆ ಸ್ಥಾಪನೆ ಮಾಡಿದ ದಿನವೇ ಮಳೆ ಸುರಿದಿದೆ. ಶೋಭಾಯಾತ್ರೆ ಮಧ್ಯದಲ್ಲಿ ಮಳೆ ಆರಂಭವಾಗಿರುವುದು ಶುಭ ಶಕುನ. ಮುಂದೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹುಬ್ಬಳ್ಳಿಯ ಪುಣ್ಯ ನೆಲದಲ್ಲಿ ಮೇಲಿಂದ ಮೇಲೆ ನೆರವೇರಲಿ ಎಂದು ವರುಣದೇವ ಆಶೀರ್ವದಿಸಿದಂತಿದೆ ಎಂದ ಅವರು, ಶ್ರೀ ಹರಿವಾಯು ಗುರುಗಳ ಕೃಪೆ, ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಆಶೀರ್ವದಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ, ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಮಹೇಂದ್ರ ಸಿಂಘಿ, ಇತರರು ಇದ್ದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹತ್ಯೆಗೀಡಾದವರ ಸ್ಮರಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಶೋಭಾಯಾತ್ರೆಗೆ ವರುಣ ಸಿಂಚನ: ಪೂರ್ವನಿಯೋಜಿತ ಸಭಾ ಕಾರ್ಯಕ್ರಮಕ್ಕೂ ಮುನ್ನ ಭವಾನಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಂಸ್ಥಾನ ಪೂಜೆ ನೆರವೇರಿತು. ನೆಹರು ಮೈದಾನದಲ್ಲಿ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಯತಿಗಳ ಮತ್ತು ಶ್ರೀ ವಾದಿರಾಜ ಯತಿವರೇಣ್ಯರ ಮೂಲ ಬೃಂದಾವನದ ತದ್ರೂಪ ಸ್ಥಾಪಿಸಿ, ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಇದಕ್ಕೂ ಪೂರ್ವದಲ್ಲಿ ಗಣಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ಸಂಜೆ ವೇಳೆಗೆ ತೊರವಿಗಲ್ಲಿಯ ಶ್ರೀ ರಾಯರ ಮಠದಿಂದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮತ್ತು ಸೋದೆಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ತೊರವಿಗಲ್ಲಿ, ಶಾ ಬಜಾರ, ದುರ್ಗದ ಬೈಲ್, ಬ್ರಾಡ್‌ವೇ, ಕೊಪ್ಪೀಕರ ರಸ್ತೆಗೆ ತಲುಪುತ್ತಿದ್ದಂತೆ ಆಲಿಕಲ್ಲು ಮಳೆ ಶುರುವಾಯಿತು. ಅಲ್ಲಿಂದ ಗುರುದ್ವಯರನ್ನು ವಾಹನದ ಮೂಲಕ ನೆಹರು ಮೈದಾನಕ್ಕೆ ಕರೆತರಲಾಯಿತು.

ಕೊಪ್ಪೀಕರ ರಸ್ತೆಯ ವರೆಗೆ ನಡೆದ ಶೋಭಾಯಾತ್ರೆಯುದ್ದಕ್ಕೂ ವಿವಿಧ ಭಜನಾ ಮಂಡಳಿಗಳಿಂದ ಸಂಕೀರ್ತನೆ, ಮಹಿಳೆಯರು ಕೋಲಾಟವಾಡುತ್ತ ಸಾಗಿದರು. ವೇದ ಘೋಷಗಳ ನಡುವೆ ಡೊಳ್ಳು, ತಾಷಾ ಡೋಲ್, ಜಗ್ಗಲಿಗಿ, ಚಂಡೆ ವಾದನ ಶೋಭಾಯಾತ್ರೆಗೆ ಮೆರಗು ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net