

ಮೈಸೂರು: ಸಮಾಜದಲ್ಲಿ ಪ್ರತಿಯೊಬ್ಬರೂ ನಡೆ, ನುಡಿ ಮತ್ತು ಸಂಸ್ಕೃತಿ ಉಳಿಸಿ ಬೆಳಸುವ ಮೂಲಕ ಮುಂದಿನ ಯುವ ಪೀಳಿಗೆ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕೆ.ಆರ್.ನಗರ ಯಡತೊರೆಯ ಶ್ರೀಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದ ಶ್ರೀ ಬ್ರಹ್ಮಾನಂದಭಾರತೀ ಸ್ವಾಮೀಜಿ ಹೇಳಿದರು.
ನಗರದ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ವೇದಾಂತ ಭಾರತೀ ಸಂಸ್ಥೆಯ ಮಹಾಸಂರಕ್ಷಕರಾದ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀಭಾರತೀತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ 50ನೇ ವರ್ಷದ ಸಂದರ್ಭದಲ್ಲಿ ಸುವರ್ಣಭಾರತೀ ಎಂಬ ಶೀರ್ಷಿಕೆಯಡಿ ಶ್ರೀಶಾಂಕರತತ್ವ ಪ್ರಸಾರ ಅಭಿಯಾನದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಶೃಂಗೇರಿ ಹಾಗೂ ವೇದಾಂತ ಭಾರತೀ ಸಂಸ್ಥೆಗಳ ಆಶ್ರಯದಲ್ಲಿ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ರಾಜ್ಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಕಲ್ಯಾಣ ವೃಷ್ಟಿ ಎಂಬ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಶ್ರೀಶಂಕರಭಗವತ್ಪಾದರು ರಚಿಸಿದ ಕಲ್ಯಾಣ ವೃಷ್ಟಿಸ್ತವ, ಶಿವ ಪಂಚಾಕ್ಷರ ನಕ್ಷತ್ರ ಮಾಲಾಸ್ತೋತ್ರ ಹಾಗೂ ಲಕ್ಷ್ಮೀನರಸಿಂಹ ಕರುಣಾರಸ ಸ್ತೋತ್ರಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೇಳಿಕೊಡಬೇಕೆಂದು ಸಂಕಲ್ಪ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳು ಪಠ್ಯಕ್ರಮದಲ್ಲಿ ಹೇಳಿದ ವಿಷಯಗಳ ಜತೆಗೆ ಈ ಸ್ತೋತ್ರಗಳನ್ನು ಪಠಿಸುವುದರಿಂದ ಅವರ ಓದಿನಲ್ಲಿ ಶ್ರದ್ಧೆ-ಭಕ್ತಿ, ಏಕಾಗ್ರತೆ, ಮನೋಬಲ, ಬುದ್ಧಿ, ಧೈರ್ಯ, ಗುರುಹಿರಿಯರಲ್ಲಿ ಗೌರವ, ಸ್ನೇಹ-ಸಹಬಾಳ್ವೆ, ರಾಷ್ಟ್ರೀಯ ಭಾವೈಕ್ಯ ಮೊದಲಾದ ಗುಣಗಳ ಮೂಲಕ ವ್ಯಕ್ತಿತ್ವ ವಿಕಾಸಗೊಳ್ಳುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಈ ಸ್ತೋತ್ರಗಳನ್ನು ಪಠಿಸಿ ಶ್ರೇಯೋಭಾಜನ ರಾಗ ಬೇಕೆಂಬುದು ಸಂಸ್ಥೆಯ ಆಪೇಕ್ಷೆಯಾಗಿದೆ ಎಂದು ಹೇಳಿದರು.
ವಿಪ್ರ ಪೋರಂನ ಅಧ್ಯಕ್ಷ, ಜಿಎಸ್‌ಎಸ್ ಸಮೂಹ ಸಂಸ್ಥೆ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಯಾರು ಯಾರನ್ನು ಬೇಧ ಭಾವ ಮಾಡದೆ ಸಮಾಜದ ಪ್ರತಿಯೊಬ್ಬರೂ ಒಬ್ಬರೊಬ್ಬರನ್ನು ಪ್ರೀತಿಸಿ, ಗೌರವಿಸುವ ಕೆಲಸವಾಗುವ ಮೂಲಕ ಮಾನವೀಯತೆ ಮೆರೆಯುವಂತೆ ಮನವಿ ಮಾಡಿದರು.
ಮುಂದಿನ ಆಕ್ಟೋಬರ್‌ನಲ್ಲಿ ಅಭಿಯಾನದ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದ್ದು, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸಮಾಜ ನಿರ್ಮಾಣ ಕಾರ್ಯದಲ್ಲಿ ಸಹಕರಿಸುವಂತೆ ಕೋರಿದರು.
ವಿಪ್ರ ಬಳಗದ ನಿರ್ದೇಶಕ, ಶಾರದ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಮಂಜುನಾಥ ಶ್ರೀ ವತ್ಸ ಮಾತನಾಡಿ, ಶ್ರೀಶಾಂಕರತತ್ತ್ವ ಪ್ರಸಾರ ಅಭಿಯಾನ ಕಾರ್ಯಕ್ರಮದಲ್ಲಿ 21 ಶಿಕ್ಷಣ ಸಂಸ್ಥೆಗಳಿಂದ ಸಾವಿರಾರು ಮಕ್ಕಳು ಪಾಲ್ಗೊಂಡಿದ್ದಾರೆ ಎಂದರು.
ವಿಪ್ರ ಬಳಗದ ಕಾರ್ಯದರ್ಶಿ ಸುಧೀಂದ್ರ, ನಿರ್ದೇಶಕರಾದ ಚಂದ್ರಶೇಖರ್, ನಾರಾಯಣ್ ಇತರರು ಇದ್ದರು. ಸಮುದಾಯದ ಮುಖಂಡರು ಮತ್ತು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ಸ್ವಾಮೀಜಿಯನ್ನು ಕುಂಭ ಕಳಶದೊಂದಿಗೆ ಸ್ವಾಗತಿಸಿ ಗೌರವಿಸಿದರು.