

ವಿಜಯಪುರ: ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು ಕಟ್ಟಿರುವ ಬಿಎಲ್‌ಡಿಇ ಸಂಸ್ಥೆ ಕ್ರಿಯಾತ್ಮಕ ಚಟುವಟಿಕೆ ಮೂಲಕ ದೇಶಾದ್ಯಂತ ಹೆಸರು ಮಾಡಿದೆ ಎಂದು ನಿರ್ದೇಶಕ ಡಾ. ಅನೀಲಕುಮಾರ ಪಾಟೀಲ(ಲಿಂಗದಳ್ಳಿ) ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ 145ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂಸ್ಥೆಯಡಿ ಬರುವ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಗುಣಮಟ್ಟದ ಶಿಕ್ಷಣ ಮತ್ತು ಚಿಕಿತ್ಸೆಗೆ ಹೆಸರುವಾಸಿಯಾಗಿದೆ ಎಂದರು.
ಬಿಎಲ್‌ಡಿಇ ಸಂಸ್ಥೆಯ ಆಯುರ್ವೇದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಕಷ್ಟು ಜನರು ಆತುರದಿಂದ ಕಾಯುವಂತಾಗಿದೆ. ಇಲ್ಲಿರುವ ಪಂಚಕರ್ಮ ಚಿಕಿತ್ಸೆ ಸೇರಿ ಹಲವು ಆರೋಗ್ಯ ಸೇವೆಗಳು ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ದೊರೆಯುತ್ತಿದ್ದು, ಈ ಭಾಗದ ಜನರಿಗೆ ವರದಾನವಾಗಿವೆ. ಹಳಕಟ್ಟಿಯವರ ಆಶಯದಂತೆ ಬಿಎಲ್ಡಿಇ ಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳ ಉತ್ತಮ ಕಾರ್ಯಗಳ ಮೂಲಕ ದೇಶದಲ್ಲಿ ಮುಂಚೂಣಿಯಲಿದ್ದು, ಸಂಸ್ಥೆ ಮತ್ತಷ್ಟು ಉನ್ನತ ಸ್ಥಾನಕ್ಕೆ ತರಲು ನಾವೆಲ್ಲರೂ ಶ್ರಮಿಸೋಣ ಎಂದರು.
ಹಳಕಟ್ಟಿ ಅವರ ಮೊಮ್ಮಗ ಗಿರೀಶ ಹಳಕಟ್ಟಿ, ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಹಿರಿಯ ಪ್ರಾಧ್ಯಾಪಕ ಸತೀಶ ಪಾಟೀಲ, ಡಿ.ಎನ್. ಧರಿ, ಕೆ.ಎ. ಪಾಟೀಲ, ಉಮಾ ಪಾಟೀಲ, ರೇಣುಕಾ ತೆನಿಹಳ್ಳಿ, ಪಿ.ಜಿ. ಗಣ್ಣೂರ, ಸೀತಾ ಬಿರಾದಾರ ಮತ್ತಿತರರಿದ್ದರು.