

ವಿಜಯಪುರ: ಉತ್ತರ ಕರ್ನಾಟಕದಲ್ಲಿಯೇ ವಿಜಯಪುರವನ್ನು ನೀಟ್, ಜೆಇಇ ಹಾಗೂ ಕೆ-ಸಿಇಟಿ ಕೋಚಿಂಗ್ ಹಬ್ ಮಾಡುವ ನಿಟ್ಟಿನಲ್ಲಿ ಬಿಎಲ್‌ಡಿಇ ದಿಟ್ಟ ಹೆಜ್ಜೆಯನ್ನಿರಿಸಿದ್ದು ರಾಜಸ್ಥಾನದ ಆಲನ್ ಕರಿಯರ್ ಇನ್‌ಸ್ಟಿಟ್ಯೂಟ್ ಸಹಯೋಗದೊಂದಿಗೆ 2025-26ನೇ ಸಾಲಿನಿಂದ ತರಬೇತಿ ಆರಂಭಿಸಿದೆ ಎಂದು ಬಿಎಲ್‌ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಇಂಜಿನಿಯರಿಂಗ್ ಮತ್ತು ವೈದ್ಯರಾಗುವ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಕನಸು ನನಸು ಮಾಡುವ ಧ್ಯೇಯದೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಆರಂಭಿಸಲಾದ ತರಬೇತಿಗೆ ವ್ಯಾಪಕ ಸ್ಪಂದನೆ ಸಿಕ್ಕಿದೆ. ಈಗಾಗಲೇ 268 ವಿದ್ಯಾರ್ಥಿಗಳು ದಾಖಲಾಗಿದ್ದು ಇನ್ನು ಕೇವಲ 32 ಪ್ರವೇಶಗಳ ಮಾತ್ರ ಬಾಕಿ ಇವೆ. ಅಲ್ಲದೇ, ಪ್ರಥಮ ಬಾರಿಗೆ ವೈದ್ಯಕೀಯ ಮತ್ತು ಐಐಟಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದಿದ್ದಲ್ಲಿ ಒಂದು ವರ್ಷದ ದೀರ್ಘಾವಧಿ ಕೋಚಿಂಗ್ ಕೂಡ ನೀಡಲಾಗುತ್ತಿದೆ. ಈಗಾಗಲೇ ದಾಖಲಾತಿಗಳು ಸಹ ಪ್ರಾರಂಭವಾಗಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಅಳಿಸಿಹಾಕಿ ವಿಜಯಪುರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿರುವ ಬಿಎಲ್‌ಡಿಇ ಸಂಸ್ಥೆ ಕೆಜಿಯಿಂದ ಪಿಜಿವರೆಗೆ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯ ಹೊಂದಿದೆ. 1910ರಲ್ಲಿ ಸ್ಥಾಪಿತವಾದ ಈ ಸಂಸ್ಥೆಗೆ 114 ವರ್ಷಗಳ ಇತಿಹಾಸವಿದೆ. ಡಾ.ಫ.ಗು. ಹಳಕಟ್ಟಿಯವರು ಸ್ಥಾಪಿಸಿದ ಈ ಸಂಸ್ಥೆಯನ್ನು ಹಂತಹಂತವಾಗಿ ಎತ್ತರಕ್ಕೆ ಒಯ್ದವರು ಬಂಥನಾಳದ ಶ್ರೀ ಸಂಗನಬಸವೇಶ್ವರ ಶಿವಯೋಗಿಗಳು. ಬಿ.ಎಂ. ಪಾಟೀಲರು ಹಾಗೂ ಎಂ.ಬಿ. ಪಾಟೀಲರು ಈ ಭಾಗದ ಜನಕ್ಕೆ ವಿದ್ಯೆ ಸಿಗಬೇಕು ಎಂಬ ಹಂಬಲದಿಂದ ಅನೇಕ ಕೋರ್ಸ್‌ಗಳನ್ನು ತಂದು ಅಭಿವೃದ್ಧಿ ಪಡಿಸಿದರು. ಪ್ರಸ್ತುತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಆರೋಗ್ಯ ವಿಜ್ಞಾನಗಳು, ಇಂಜಿನಿಯರಿಂಗ್, ವಿಜ್ಞಾನ, ಕಲೆ, ವಾಣಿಜ್ಯ, ವ್ಯಾಪಾರ ನಿರ್ವಹಣೆ ಮತ್ತು ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ 80ಕ್ಕೂ ಹೆಚ್ಚು ಸಂಸ್ಥೆಗಳನ್ನು ಬಿಎಲ್‌ಡಿಇ ಸಂಸ್ಥೆಯು ನಡೆಸುತ್ತದೆ. ಕರ್ನಾಟಕದ ಮೂರು ಜಿಲ್ಲೆಗಳಲ್ಲಿ 16 ಕ್ಯಾಂಪಸ್ ಹೊಂದಿದ್ದು, 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಸುನೀಲಗೌಡರು ತಿಳಿಸಿದರು.
ಈ ಭಾಗದ ವಿದ್ಯಾರ್ಥಿಗಳು ಇಂಜಿನಿಯರ್ ಹಾಗೂ ವೈದ್ಯರಾಗುವ ಕನಸು ಕಟ್ಟಿಕೊಂಡು ದೂರದ ಊರುಗಳಿಗೆ ಕೋಚಿಂಗ್ ಪಡೆಯಲು ತೆರಳುತ್ತಿದ್ದಾರೆ. ವಿದ್ಯಾರ್ಥಿಗಳ ಈ ಪ್ರಯಾಸ ಅರಿತು ದೇಶದಲ್ಲಿಯೇ ಮಾದರಿಯಾದ ರಾಜಸ್ಥಾನದ ಆಲನ್ ಕರಿಯರ್ ಅಕಾಡೆಮಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಜಿಲ್ಲೆಯಲ್ಲಿಯೇ ಅತ್ಯುತ್ತಮ ಕೋಚಿಂಗ್ ವ್ಯವಸ್ಥ ಕಲ್ಪಿಸಲಾಗುತ್ತಿದೆ ಎಂದರು.
ಈ ಸಹಭಾಗಿತ್ವವು ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಗಳನ್ನು ಅನುಸರಿಸಲು ಪ್ರಯತ್ನಿಸುವವರಿಗೆ ವಿಶೇಷ ಅವಕಾಶಗಳನ್ನು ಒದಗಿಸಲು ಉದ್ದೇಶಿಸಿದೆ. ವಿಶೇಷ ಪಠ್ಯಕ್ರಮ ಮತ್ತು ಸಮಗ್ರ ಪಠ್ಯಕ್ರಮದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಗಿದೆ.
ಏಕೀಕೃತ ಕಲಿಕಾ ತರಬೇತಿ ಪಾಠಕ್ರಮ, ಪರಿಣಿತ ಅಧ್ಯಾಪಕರಿಂದ ಉಪನ್ಯಾಸ, ಆಫ್‌ಲೈನ್ ತರಗತಿಗಳು, ಮಾದರಿ ಪರೀಕ್ಷೆಗಳು ಮತ್ತು ವೈಯಕ್ತಿಕ ಮಾರ್ಗದರ್ಶನ ಲಭ್ಯವಾಗಲಿದೆ. ಸೆಮಿನಾರ್‌ಗಳು ಮತ್ತು ಪುನರಾವಲೋಕನ ಕಾಸ್‌ಗಳನ್ನು ಒದಗಿಸಲಾಗುವುದು ಎಂದು ಸುನೀಲಗೌಡರು ತಿಳಿಸಿದರು.
ಆಲನ್ ಕರಿಯರ್ ಸಂಸ್ಥೆಯ ಮುಖ್ಯಸ್ಥ ಡಾ. ಸೀತಾರಾಮ ಮಾತನಾಡಿ, 1988 ರಲ್ಲಿ ರಾಜಸ್ಥಾನದ ಕೋಟಾದಲ್ಲಿ ಸ್ಥಾಪಿತವಾದ ಆಲನ್ ಕರಿಯರ್ ಸಂಸ್ಥೆ ನೀಟ್, ಜೆಇಇ ಹಾಗೂ ಕೆ-ಸಿಇಟಿ ಕೋಚಿಂಗ್‌ನಲ್ಲಿ ಮುಂಚೂಣಿಯಲ್ಲಿದೆ. ಈ ಪ್ರವೇಶ ಪರೀಕ್ಷೆಗಳಲ್ಲಿ ಶ್ರೇಷ್ಠ ಶ್ರೇಯಾಂಕದಲ್ಲಿ ವಿಜೇತರಾಗುವವರ‌್ನು ತರಬೇತುಗೊಳಿಸುವ ಬದ್ಧತೆಯ ಗುರಿ ಹೊಂದಿದೆ. ಶ್ರೇಷ್ಠ ಸಾಧನೆಯ ಇತಿಹಾಸ ಈ ಸಂಸ್ಥೆಗಿದೆ. ಭಾರತದಲ್ಲಿ ಸುಮಾರು 64 ಕೇಂದ್ರಗಳಲ್ಲಿ ಈ ಸಂಸ್ಥೆಯಿಂದ ತರಬೇತಿ ನಡೆಯುತ್ತದೆ. ಪ್ರತಿವರ್ಷ 3.3 ಲಕ್ಷ ವಿದ್ಯಾರ್ಥಿಗಳು ತರಬೇತಿ ಪಡೆಯುವ ಸಾಮರ್ಥ್ಯ ಇದ್ದು, ಈವರೆಗೆ 30 ಲಕ್ಷ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ತರಬೇತಿ ಪಡೆದಿದ್ದಾರೆ ಎಂದರು.
ಡಾ.ರಾಘವೇಂದ್ರ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.