

ವಿಜಯಪುರ : ಶಿಕ್ಷಣದ ಎಲ್ಲ ಕ್ಷೇತ್ರಗಳಲ್ಲೂ ಈಗ ತ್ವರಿತವಾಗಿ ಬದಲಾವಣೆಯಾಗುತ್ತಿದ್ದು, ಜೀವನದಲ್ಲಿ ಜ್ಞಾನವೃದ್ಧಿಗೆ ನಿರಂತರ ಕಲಿಕೆ ಅಗತ್ಯವಾಗಿದೆ ಎಂದು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆ ಡೀಮ್ಡ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಡಾ.ಪಿ.ವಿ.ವಿಜಯರಾಘವನ್ ಹೇಳಿದರು.
ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 10ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿ, ವೃತ್ತಿ ಜೀವನದಲ್ಲಿ ಯಶಸ್ವಿಗೆ ಕೌಶಲ ಮಹತ್ವದ್ದಾಗಿದೆ. ಬದುಕಿನಲ್ಲಿ ಹೊಸತನ, ಜ್ಞಾನ ಮತ್ತು ಕೌಶಲಾಭಿವೃದ್ಧಿ ಕಲಿಯಲು ಕೊನೆ ಎಂಬುದಿಲ್ಲ. ಯಾವುದೇ ವೃತ್ತಿಯಲ್ಲಿ ಕೌಶಲದ ಜೊತೆ ಉತ್ತಮ ಸಂವಹನವೂ ಮುಖ್ಯ. ದೇವರಲ್ಲಿ ನಂಬಿಕೆ ಇಟ್ಟು ನಿಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿದರೆ ಅದಕ್ಕೆ ತಕ್ಕ ಗೌರವ ತಾನಾಗಿಯೇ ಬರುತ್ತದೆ ಎಂದು ಅವರು ವೈದ್ಯಕೀಯ ಪದವೀಧರರಿಗೆ ಸಲಹೆ ನೀಡಿದರು.
ಧನಾತ್ಮಕ ಮನೋಭಾವದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅನಗತ್ಯ ಒತ್ತಡಕ್ಕೆ ಒಳಗಾಗದೆ ನಿರ್ಭೀತಿಯಿಂದ ಮುನ್ನಡೆಯಬೇಕು. ಮುಂದಿನ 25-26 ವರ್ಷಗಳು ನಿಮ್ಮ ಜೀವನವನ್ನು ರೂಪಿಸುವುದರ ಜೊತೆಗೆ ದೇಶದ ಭವಿಷ್ಯವನ್ನೂ ನಿರ್ಧರಿಸಲಿವೆ. ನಿಮಗೆ ವಹಿಸಲಾಗುವ ಜವಾಬ್ದಾರಿಗಳನ್ನು ಶ್ರಮವಹಿಸಿ, ಪ್ರಾಮಾಣಿಕವಾಗಿ ಮಾಡಿಬೇಕು ಎಂದರು.
ಯಶಸ್ಸು ಕೇವಲ ಒಂದು ದಿನದಲ್ಲಿ ಸಿಗುವುದಿಲ್ಲ. ಸತತ ಪ್ರಯತ್ನ ಮತ್ತು ಶಿಸ್ತಿನಿಂದ ಅದು ಲಭಿಸುತ್ತದೆ. ತಾವೆಲ್ಲರೂ ನವೀನ ಮತ್ತು ಸೃಜನಶೀಲರಾಗಿ ಕೆಲಸ ಮಾಡಬೇಕು. ಸಮಾಜವನ್ನು ಉತ್ತಮವಾಗಿ ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ಗಮನವಿರಲಿ. ನಿಮ್ಮ ಸ್ವಂತಿಕೆಗಾಗಿ ಸಣ್ಣ ಪ್ರಮಾಣದಲ್ಲಿ ಏನನ್ನಾದರೂ ಮಾಡಿ ಬದಲಾವಣೆ ತಂದುಕೊಳ್ಳಿ. ತಂಡವಾಗಿ ಸ್ಫ್ಪೂರ್ತಿಯಿಂದ ಕೆಲಸ ಮಾಡುವ ಮನಸ್ಥಿತಿ ರೂಪಿಸಿಕೊಳ್ಳಿ. ಕರ್ತವ್ಯದ ಜೊತೆಗೆ ಕುಟಂಬಕ್ಕೂ ಸಮಯ ಮೀಸಲಿಡುವುದನ್ನು ಮರೆಯಬೇಡಿ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಾಗಿ ನೀವು ಕಲಿತ ತತ್ವಾದರ್ಶಗಳಡಿ ಜೀವನ ಸಾಗಿಸಬೇಕು. ಇದು ಜಾಗತೀಕರಣ ಯುಗವಾಗಿದ್ದು, ಬಿಎಲ್‌ಡಿಇ ವಿವಿಯಿಂದ ಪದವೀಧರರಾಗಿ ಒಳ್ಳೆಯ ಸ್ಥಾನಕ್ಕೇರಿ ಜಗತ್ತಿಗೆ ನಿಮ್ಮದೆ ಆದ ಕೊಡುಗೆ ನೀಡಬೇಕು. ಮುಂದಿನ ಪೀಳಿಗೆಗಾಗಿ ದೇಶ ಮತ್ತು ವಿಶ್ವಕ್ಕಾಗಿ ಮಾದರಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ದೇಶದಲ್ಲಿ 2020ರಲ್ಲಿ ನೂತನ ಶಿಕ್ಷಣ ನೀತಿ ಘೋಷಣೆ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಹೊಸ ಶಿಕ್ಷಣ ನೀತಿ ಜಾರಿಗೆ ಶ್ರಮಿಸುತ್ತಿವೆ. ಎಲ್ಲ ಆರೋಗ್ಯ ಶಿಕ್ಷಣ ಸಂಸ್ಥೆಗಳು ಇದರ ಮಹತ್ವ ಅರಿತು ೌಂಡೇಶನ್ ಕೂರ್ಸುಗಳು, ಸೇರಿದಂತೆ ಕೌಶಲಾಧಾರಿತ ಕೋರ್ಸುಗಳಿಗೆ ಆದ್ಯತೆ ನೀಡುವ ಮೂಲಕ ನೀಟ್‌ನಂತಹ ಪರೀಕ್ಷೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಎನ್‌ಎಂಸಿ ಕೂಡ ಸ್ಪರ್ಧಾತ್ಮಕ ಸ್ನಾತಕೋತ್ತರ ಮತ್ತು ಸೂಪರ್ ಸ್ಪೇಷಾಲಿಟಿ ಕೋರ್ಸುಗಳಿಗೆ ಪಠ್ಯಕ್ರಮ ರೂಪಿಸಿದೆ ಎಂದರು.
ಕೋವಿಡ್ 19 ಪರಿಸ್ಥಿತಿ ಆರೋಗ್ಯ ರಕ್ಷಣೆಯಲ್ಲಿ ಸಮಗ್ರ ವಿಧಾನದ ಅಗತ್ಯವನ್ನು ನಮಗೆ ತೋರಿಸಿದೆ. ವೈದ್ಯರು, ದಾದಿಯರು, ಔಷಧಕಾರರು, ದಂತವೈದ್ಯರು ಅಥವಾ ಸಂಬಂಧಿತ ಆರೋಗ್ಯ ವೃತ್ತಿಪರರು ನಿರ್ವಹಿಸುವ ಕರ್ತವ್ಯಗಳಿಗೆ ಅನುಗುಣವಾಗಿ ಅಗತ್ಯವಿರುವ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳ ಅವಧಿ, ರಚನೆ ಮತ್ತು ವಿನ್ಯಾಸದ ಕುರಿತು ಶಿಕ್ಷಣದ ಮರುಕಲ್ಪನೆ ಮಾಡಲಾಗುತ್ತಿದೆ. ವೈದ್ಯಕೀಯ ಜ್ಞಾನ, ರೋಗ ನಿರ್ಣಯ ಕೌಶಲಗಳು, ಸೂಕ್ತವಾದ ಕಾರ್ಯವಿಧಾನದ ಕೌಶಲಗಳು, ಸಂವಹನ ಕೌಶಲಗಳು, ಪ್ರಮಾಣೀಕರಿಸಬಹುದಾದ ಕೌಶಲಗಳ ಮೇಲೆ ತುರ್ತು ಕೌಶಲ ಮತ್ತು ತರಬೇತಿಗಳನ್ನು ನೀಡಲಾಗುತ್ತಿದೆ. ನಮ್ಮ ಜನರು ಆರೋಗ್ಯ ರಕ್ಷಣೆಯಲ್ಲಿ ಬಹು ಆಯ್ಕೆಯನ್ನು ಇಷ್ಟಪಡುವುದರಿಂದ ಬೇಡಿಕೆಗೆ ತಕ್ಕಂತೆ ಸೇವೆ ನೀಡಬೇಕಿದೆ. ಅಲೋಪಥಿ ವೈದ್ಯಕೀಯ ಶಿಕ್ಷಣದ ಎಲ್ಲಾ ವಿದ್ಯಾರ್ಥಿಗಳು ಮೂಲಭೂತ ಶಿಕ್ಷಣವನ್ನು ಹೊಂದಿರುತ್ತಾರೆ. ಆಯುರ್ವೇದ, ಯುನಾನಿ, ಸಿದ್ಧ ಮುಂತಾದ ಭಾರತೀಯ ಪರ್ಯಾಯ ವೈದ್ಯಕೀಯ ಪದ್ಧತಿಗಳ ತಿಳಿವಳಿಕೆ, ಹೋಮಿಯೋಪಥಿ(ಆಯುಷ್) ಮತ್ತು ಪ್ರಕೃತಿ ಚಿಕಿತ್ಸೆಯ ರೂಪಗಳು ಸವಾಲಾಗಿವೆ ಎಂದು ಅವರು ಹೇಳಿದರು.
287 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ ಒಟ್ಟು 287 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅವರಲ್ಲಿ 4 ಜನರಿಗೆ ಪಿಎಚ್‌ಡಿ, 62 ವೈದ್ಯಕೀಯ ಸ್ನಾತಕೋತ್ತರ ಪದವಿ, 2 ಎಂಎಚ್‌ಎ, 2 ಎಂಪಿಎಚ್, 202 ಎಂಬಿಬಿಎಸ್ ಹಾಗೂ 15 ವಿದ್ಯಾರ್ಥಿಗಳಿಗೆ ಬಿ. ಎಸ್ಸಿ. (ಎಂಐಟಿ) ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನ ಮಾಡಲಾಯಿತು.
ಈ ಪದವಿ ಪ್ರಧಾನ ಸಮಾರಂಭದಲ್ಲಿ 17 ಚಿನ್ನದ ಪದಕಗಳು ಹಾಗೂ 3 ನಗದು ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಸ್ನಾತಕೋತ್ತರ ವಿಭಾಗದಲ್ಲಿ ಡಾ.ನಮ್ರತಾ ಬಿ .ಎಂ ಎರಡು ಚಿನ್ನದ ಪದಕಗಳನ್ನು, ಎಂಬಿಬಿಎಸ್ ಪದವಿ ವಿಭಾಗದಲ್ಲಿ ಡಾ.ಗೌರವ ಅರೊರಾ ಆರು ಚಿನ್ನದ ಪದಕ, ಡಾ.ರುಚಿ ಸಿಂಗ್ ಮೂರು ಚಿನ್ನದ ಪದಕ ಮತ್ತು ಎರಡು ನಗದು ಬಹುಮಾನ ಹಾಗೂ ಡಾ.ಯಾಶಿಕಾ.ಸಿ ಅವರಿಗೆ ಎರಡು ಚಿನ್ನದ ಪದಕಗಳನ್ನು ನೀಡಲಾಯಿತು.
ಬಿಎಲ್‌ಡಿಇ ಡೀಮ್ಡ್ ವಿವಿ ಕುಲಪತಿ ಎಂ.ಬಿ.ಪಾಟೀಲ, ಉಪ ಕುಲಪತಿ ಡಾ. ಆರ್.ಎಸ್.ಮುಧೋಳ, ಡಾ.ನಿಲಿಮಾ ಡೊಂಗ್ರೆ, ಡಾ. ಕುಶಾಲ ದಾಸ್, ಡಾ.ವೈ.ಎಂ.ಜಯರಾಜ, ಡಾ.ಚಂದ್ರಕಾಂತ ಕೊಕಟೆ, ಡಾ.ಅರಣ ಚ. ಇನಾಮದಾರ, ಡಾ.ನಿರಂಜನ ಕುಮಾರ, ಡಾ.ಅರವಿಂದ ಪಾಟೀಲ, ಡಾ.ಆರ್.ವಿ.ಕುಲಕರ್ಣಿ, ಡಾ.ಎಸ್.ಎಸ್.ದೇವರಮನಿ ಉಪಸ್ಥಿತರಿದ್ದರು.