

ವಿಜಯಪುರ: ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸೆ.12ರಂದು ಬೆಳಗ್ಗೆ 11 ಗಂಟೆಗೆ ವಿವಿ ಆವರಣದಲ್ಲಿರುವ ಗ್ರಂಥಾಲಯ ಸಭಾಭವನದಲ್ಲಿ ನಡೆಯಲಿದೆ.
ಚೆನ್ನೈನ ಪೊರೂರ್ ನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆಯ ಕುಲಪತಿ ಪ್ರೊ. ಡಾ.ಪಿ.ವಿ.ವಿಜಯರಾಘವನ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಕುಲಾಧಿಪತಿ ಡಾ.ಎಂ.ಬಿ.ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್. ಎಸ್.ಮುಧೋಳ, ವಿವಿ ಸಮ ಕುಲಪತಿ ಡಾ.ಅರುಣ್ ಸಿ. ಇನಾಮದಾರ, ವಿವಿ ಕುಲಸಚಿವ ಡಾ.ಆರ್.ವಿ.ಕುಲಕರ್ಣಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅರವಿಂದ್ ವಿ. ಪಾಟೀಲ ಈ ಘಟಿಕೋತ್ಸವದಲ್ಲಿ ಉಪಸ್ಥಿತರಿರಲಿದ್ದಾರೆ.
ಒಟ್ಟು 287 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಗುತ್ತದೆ. ಅವರಲ್ಲಿ 4 ಜನರಿಗೆ ಪಿಎಚ್‌ಡಿ, 62 ವೈದ್ಯಕೀಯ ಸ್ನಾತಕೋತ್ತರ ಪದವಿ, 2 ಎಂಎಚ್‌ಎ 2 ಎಂಪಿಎಚ್, 202 ಎಂಬಿಬಿಎಸ್ ಹಾಗೂ 15 ವಿದ್ಯಾರ್ಥಿಗಳಿಗೆ ಬಿ.ಎಸ್ಸಿ. (ಎಂ. ಐ. ಟಿ) ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುತ್ತದೆ.
17 ಚಿನ್ನದ ಪದಕಗಳು ಹಾಗೂ 3 ನಗದು ಬಹುಮಾನಗಳನ್ನು ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ. ಸ್ನಾತಕೋತ್ತರ ವಿಭಾಗದಲ್ಲಿ ಡಾ.ನಮ್ರತಾ ಬಿ .ಎಂ ಎರಡು ಚಿನ್ನದ ಪದಕ, ಎಂಬಿಬಿಎಸ್ ಪದವಿ ವಿಭಾಗದಲ್ಲಿ ಡಾ. ಗೌರವ ಅರೊರಾ ಆರು ಚಿನ್ನದ ಪದಕ, ಡಾ.ರುಚಿ ಸಿಂಗ್ ಮೂರು ಚಿನ್ನದ ಪದಕ ಮತ್ತು ಎರಡು ನಗದು ಬಹುಮಾನಗಳು ಹಾಗೂ ಡಾ. ಯಾಶಿಕಾ ಸಿ. ಅವರಿಗೆ ಎರಡು ಚಿನ್ನದ ಪದಕಗಳನ್ನು ನೀಡಲಾಗುತ್ತಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಯಲದ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಸ್.ಎಸ್. ದೇವರಮನಿ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.