ಸಮಾಜಮುಖಿ ಸೇವೆ ಮಾಡುವ ಸಂಕಲ್ಪವಾಗಲಿ: ಕಸಾಪ ತಾಲೂಕು ಅಧ್ಯಕ್ಷ ವಿ.ಸಿ.ಉಮಾಶಂಕರ ಹೇಳಿಕೆ

Blanket And clothing distribution Mandya
Published on

ಮಂಡ್ಯ: ಪ್ರತಿಯೊಬ್ಬರೂ ಸಮಾಜಮುಖಿ ಕಾರ್ಯಗಳನ್ನು ಮಾಡುವ ಸಂಕಲ್ಪ ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮದ್ದೂರು ತಾಲೂಕು ಘಟಕದ ಅಧ್ಯಕ್ಷ ವಳಗೆರೆಹಳ್ಳಿ ವಿ.ಸಿ. ಉಮಾಶಂಕರ ತಿಳಿಸಿದರು.

ತಾಲೂಕಿನ ತುಂಬಕೆರೆ ಗ್ರಾಮದ ನಿರಾಶ್ರಿತರಿಗೆ ಸಂಕಲ್ಪ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ಹೊದಿಕೆ, ವಸ್ತ್ರ ಸೇರಿದಂತೆ ಇನ್ನಿತರ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಸಮಾಜ ಜೀವಿಯಾದ ಮನುಷ್ಯ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಔದಾರ್ಯ ಗುಣ ಬೆಳೆಸಿಕೊಳ್ಳಬೇಕು. ಉಳ್ಳವರು, ಇಲ್ಲದಿರುವವರಿಗೆ ಸಹಾಯ ಮಾಡಿದಾಗ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಆ ನಿಟ್ಟಿನಲ್ಲಿ ಸಂಕಲ್ಪ ಟ್ರಸ್ಟ್ ಹಲವು ಮಾನವೀಯ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ನಿರಾಶ್ರಿತರು ಸಂಕಷ್ಟಮಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ನೀರು, ನೆರಳು, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕಿರುವುದು ಸರ್ಕಾರದ ಕರ್ತವ್ಯ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ನಿರಾಶ್ರಿತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಬೇಕು. ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳೊಟ್ಟಿಗೆ ಸೇರಿ ನಿರಾಶ್ರಿತರ ಮತ್ತು ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನ ರೂಪಿಸಿ ಅನುಷ್ಟಾನ ಮಾಡುವ ಇಂಗಿತ ಹೊಂದಿದ್ದೇವೆ. ಅದು ಸಹಕಾರವಾಗಬೇಕಾದರೆ ಪ್ರತಿಯೊಬ್ಬರು ಮಾನವೀಯ ಗುಣ ಬೆಳೆಸಿಕೊಂಡು ಸಹಾಯ ಮಾಡುವ ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು.

ವೇದಿಕೆಯ ಜಿಲ್ಲಾ ಸಂಚಾಲಕ ದೇವರಾಜ್ ಕೊಪ್ಪ, ಡಿಎಸ್‌ಎಸ್ ಸಂಚಾಲಕ ಬಿ.ಆರ್.ಚೇತನ್‌ಕುಮಾರ್, ಸಂಕಲ್ಪ ಟ್ರಸ್ಟ್‌ನ ಬಿ.ಎ.ಮಧುಕುಮಾರ, ಸಿ.ಪಿ.ಅಶ್ವಿನಿ, ಅಚ್ಚು ಇತರರಿದ್ದರು. ಇದೇ ವೇಳೆ ಮಂಡ್ಯ ನಗರದ ಜ್ಞಾನಸಿಂಧು ವೃದ್ದಾಶ್ರಮದಲ್ಲಿ ವೃದ್ಧರಿಗಾಗಿ ಅನ್ನದಾಸೋಹ, ನಂತರ ಆಶ್ರಮದ ಆವರಣದಲ್ಲಿ ಸಸಿ ನೆಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net