ಕಾಮಗಾರಿ ಆರಂಭಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ

CTD 18 DISTC INCHRGE SEC-03
Published on

ಚಿತ್ರದುರ್ಗ: ಟೆಂಡರ್ ಹಾಗೂ ಕಾರ್ಯಾದೇಶ ಪಡೆದ ಬಳಿಕವೂ ಈವರೆಗೆ ಕಾಮಗಾರಿ ಪ್ರಾರಂಭಿಸದ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ‌್ಯದರ್ಶಿ ಡಾ.ರಾಮಪ್ರಸಾಥ್ ವಿ.ಮನೋಹರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಲ ಜೀವನ್ ಮಿಷನ್ ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಗಳ (ಎಂವಿಎಸ್) ಅನುಷ್ಠಾನ ಕುರಿತ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ನೋಟಿಸ್ ಸ್ವೀಕರಿಸಿದ 15 ದಿನದೊಳಗೆ ಕೆಲಸ ಆರಂಭಿಸದೆ ಇದ್ದರೆ, ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ತಾಕೀತು ಮಾಡಿದರು. ಜಲಜೀವನ್ ಮಿಷನ್ ಹಾಗೂ ಎಂವಿಎಸ್ ಅನುಷ್ಠಾನಕ್ಕೆ ಅನುದಾನದ ಕೊರತೆ ಇಲ್ಲವಾದರೂ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಗುತ್ತಿಗೆದಾರರು ಬಿಲ್ ಪಡೆಯುವುದಕ್ಕೆ ಮುಂದಾಗುತ್ತಾರೆಯೇ ಹೊರತು, ಕಾಮಗಾರಿ ಪೂರ್ಣಗೊಳಿಸುವ ಪ್ರಾಮಾಣಿಕ ಯತ್ನ ಮಾಡುತ್ತಿಲ್ಲ ಎಂದರು.

ಅಧಿಕಾರಿಗಳು ಗಮನಹರಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಜನರಿಗೆ ನೀರು ಒದಗಿಸಬೇಕು. ಡಿಪಿಆರ್ ಸಿದ್ಧಪಡಿಸುವ ಮುನ್ನ ನೀರಿನ ಮೂಲಗಳ ಬಗ್ಗೆ ಖಾತ್ರಿ ಪಡಿಸಿಕೊಂಡು ಪೈಪ್‌ಲೈನ್ ಅಳವಡಿಸಬೇಕು. ಇಲ್ಲವಾದಲ್ಲಿ ಹಣ ಹಾಗೂ ಸಮಯ ವ್ಯರ್ಥವಾಗುತ್ತದೆ. ಇಂತಹ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿ ಇಂಜಿನಿಯರ್‌ಗಳನ್ನು ಸಂಪೂರ್ಣ ಹೊಣೆ ಮಾಡಲಾಗುವುದು. ಪೈಪ್ ಹಾಗೂ ಇತರೆ ವಸ್ತುಗಳ ಗುಣಮಟ್ಟದ ಮೌಲ್ಯಮಾಪನ ಮಾಡಿಸಬೇಕು ಎಂದು ಹೇಳಿದರು.

ಜಲ ಜೀವನ್‌ಮಿಷನ್ ಯೋಜನೆಯಡಿ ಹಳ್ಳಿಯನ್ನು ಘಟಕವೆಂದು ಪರಿಗಣಿಸಿ ಕರೆಯುವ ಟೆಂಡರ್‌ನಲ್ಲಿ ಸ್ಥಳೀಯ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ. ಅನುಭವ ಹಾಗೂ ನಿಯಮಗಳ ಮಾಹಿತಿ ಕೊರತೆಯಿಂದಾಗಿ ಸ್ಥಳೀಯರು ಟೆಂಡರ್ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.

ಇದರ ಲಾಭ ಪಡೆದ ದೂರದ ಊರುಗಳ ಗುತ್ತಿಗೆದಾರರು ಪೈಪ್‌ಗಳು, ಕೆಲಸಗಾರರಿಲ್ಲವೆಂಬ ನೆಪದಲ್ಲಿ ಕೆಲಸವನ್ನು ವಿಳಂಬ ಮಾಡುತ್ತಿದ್ದು, ಟೆಂಡರ್ ನಿಯಮಗಳ ಸರಳೀಕರಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ 1080 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 1001 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕುರಿತು ವರದಿ ಪಡೆಯುವಂತೆ ಜಿಪಂ ಸಿಇಒ ಎಂ.ಎಸ್.ದಿವಾಕರ್ ಅವರಿಗೆ ಸೂಚಿಸಿದರು. ಮುಂದಿನ ಬಾರಿ ಆರ್‌ಒ ಘಟಕಗಳಿಗೆ ಭೇಟಿ ನೀಡುತ್ತೇನೆ ಎಂದರು.

ಉಪ ಕಾರ‌್ಯದರ್ಶಿ ತಿಮ್ಮಪ್ಪ, ಮುಖ್ಯಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಆರ್‌ಡಿಪಿಆರ್ ಇಇ ಮಹಾಂತೇಶಪ್ಪ ಜಿ.ಕನ್ನೂರು, ಜಲ ಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ ಎಸ್.ನಾಡರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net