ಕಪ್ಪುತಲೆ ಹುಳುಬಾಧೆ ನಿಯಂತ್ರಣಕ್ಕೆ ಕ್ರಮವಹಿಸಿ: ತೋಟಗಾರಿಕೆ ಇಲಾಖೆ ಡಿಡಿಗೆ ಎಂಎಲ್‌ಸಿ ದಿನೇಶ್‌ಗೂಳಿಗೌಡ ಸೂಚನೆ

1 (1)
Published on

ಮದ್ದೂರು: ತಾಲೂಕಿನ ಕೆ.ಕೋಡಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾವಿರಾರು ತೆಂಗಿನ ಮರಗಳಿಗೆ ಕಪ್ಪು ತಲೆ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅವರಿಗೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ಪತ್ರಿಕೆಯಲ್ಲಿ ಜು.5 ರಂದು ತೆಂಗಿಗೆ ಕಪ್ಪು ತಲೆ ಹುಳು ಬಾಧೆ ಮತ್ತು ಜು.17 ರಂದು ರೋಗ ಪತ್ತೆ ಕೇಂದ್ರ ಅಗತ್ಯ ಎಂಬ ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿ ಗಮನಿಸಿದ ದಿನೇಶ್ ಗೂಳಿಗೌಡ ಅವರು, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ, ಸೋಮನಹಳ್ಳಿ, ತೈಲೂರು, ವೈದ್ಯನಾಥಫುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾವಿರಾರು ತೆಂಗಿನ ಮರಗಳಿಗೆ ಕಪ್ಪು ತಲೆ ಹುಳುವಿನ ಭಾದೆ ಕಾಣಿಸಿಕೊಂಡಿರುವುದು ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿರುವುದರಿಂದ ಈ ಸಂಬಂಧ ಜರೂರಾಗಿ ಕ್ರಮ ಕೈಗೊಂಡು ರೋಗ ನಿಯಂತ್ರಣಕ್ಕೆ ಮುಂದಾಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರತಿಕ್ರಿಯಿಸಿ, ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ, ಸೋಮನಹಳ್ಳಿ, ತೈಲೂರು, ವೈದ್ಯನಾಥಪುರ ಮತ್ತು ಪಾಂಡವಪುರ ತಾಲೂಕಿನ ಗುಮ್ನಳ್ಳಿ, ಹೊಸ ಕನ್ನಂಬಾಡಿ, ಕ್ಯಾತನಹಳ್ಳಿ ಭಾಗಗಳಲ್ಲಿ 250 ರಿಂದ 300 ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯು ಕಪ್ಪು ತಲೆ ಹುಳುವಿನ ಹಾನಿಗೆ ಒಳಗಾಗಿರುವುದು ಕಂಡುಬಂದಿರುತ್ತದೆ. ಇದರ ನಿಯಂತ್ರಣಕ್ಕಾಗಿ ಇಲಾಖೆ ವತಿಯಿಂದ ಗೋನಿಯೋಜಸ್ ಪ್ಯಾರಾಸೈಟ್ ಬಿಡುಗಡೆಗೆ ಕ್ರಮವಹಿಸಲಾಗಿರುತ್ತದೆ ಮತ್ತು ಮುಂದುವರೆಸಲಾಗಿದೆ. ಇದರ ತೀವ್ರತೆ ಕಡಿಮೆಯಾಗದಿದ್ದಲ್ಲಿ ವಿಜ್ಞಾನಿಗಳ ಅಭಿಪ್ರಾಯ ಪಡೆದು ಬೇರಿನ ಮೂಲಕ ಔಷಧ ಉಪಚಾರ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಔಷಧ ವಿತರಣೆ: ಇತ್ತೀಚಿನ ಹವಾಮಾನ ವೈಪರಿತ್ಯದಿಂದಾಗಿ ತೆಂಗಿನ ಬೆಳೆಯಲ್ಲಿ ಕಾಡುತ್ತಿರುವ ಕಪ್ಪು ತಲೆಹುಳುವಿನ ಬಾಧೆಯಿಂದ ಬಾಧಿತರಾಗಿರುವ ರೈತರು, ತೋಟಗಾರಿಕಾ ಇಲಾಖೆ ಮದ್ದೂರು ಕಚೇರಿಗೆ ಕೀಟಬಾಧಿತ ತೋಟದ ಫೋಟೋ, ಪಹಣಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಪಾಸ್‌ಬುಕ್ ಜೆರಾಕ್ಸ್ ಅನ್ನು ಅರ್ಜಿಯೊಂದಿಗೆ ಸಲ್ಲಿಸಿದರೆ ಕೀಟಬಾಧೆಗೆ ಉಚಿತವಾಗಿ ಔಷಧ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net