ಕಪ್ಪಾಗುತ್ತಿದೆ ಹತ್ತಿ-ಗೋವಿನಜೋಳಕ್ಕೆ ಹುಳು ಕಾಟ

ROGA
Published on

ಮುಂಡರಗಿ: ಜಿಟಿಜಿಟಿ ಮಳೆ ಹಾಗೂ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ತಾಲೂಕಾದ್ಯಂತ ಹತ್ತಿ, ಸೂರ್ಯಕಾಂತಿ, ಗೋವಿನಜೋಳ, ಶೇಂಗಾ ಮೊದಲಾದ ಬೆಳೆಗಳಿಗೆ ರೋಗಬಾಧೆ ಕಂಡು ಬಂದಿದ್ದು, ರೈತರು ಆತಂಕಗೊಂಡಿದ್ದಾರೆ.

ತಾಲೂಕಿನಲ್ಲಿ 6,250ಹೆಕ್ಟೇರ್ ಸೂರ್ಯಕಾಂತಿ, 10,330ಹೆಕ್ಟೇರ್ ಗೋವಿನಜೋಳ, 2,900ಹೆಕ್ಟೇರ್‌ನಲ್ಲಿ ಶೇಂಗಾ, 465ಹೆಕ್ಟರ್ ಹತ್ತಿ, 55ಹೆಕ್ಟರ್ ಹೆಸರು ಬೆಳೆಯಲಾಗಿದೆ. ನಿರಂತರ ಮಳೆಯಿಂದಾಗಿ ಹತ್ತಿ ಬೆಳೆ ಕಪ್ಪಾಗುತ್ತಿದೆ. ಕೆಲವೆಡೆ ಈಗಾಗಲೇ ಗೋವಿನಜೋಳಕ್ಕೆ ಲದ್ದಹುಳು ಕೀಟ ಬಾಧೆ ಶುರುವಾಗಿದೆ. ಶೇಂಗಾ ಬೆಳೆಯಲ್ಲಿ ಹಳದಿ ರೋಗ ಕಾಣಿಸಿಕೊಳ್ಳುತ್ತಿದೆ. ಸೂರ್ಯಕಾಂತಿ ತೆನೆ ತೊಯ್ದು ಕಾಳು ಜೊಳ್ಳಾಗುತ್ತದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ.

ಮುಂಗಾರು ಪ್ರಾರಂಭದಲ್ಲಿ ಮಳೆ ಬಾರದೆ ತಾಲೂಕಿನ ಬಹುತೇಕ ಭಾಗಗಳಲ್ಲಿ ಸಮರ್ಪಕವಾಗಿ ಬಿತ್ತನೆ ಮಾಡಿಲ್ಲ. ಅಲ್ಪ ಸ್ವಲ್ಪ ಮಳೆಗೆ ಹಾಗೂ ನೀರಾವರಿ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ರೋಗಬಾಧೆ ಕಾಣಿಸಿಕೊಳ್ಳುತ್ತಿರುವುದು ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ತೊಂದರೆಗೀಡು ಮಾಡುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಇಲ್ಲದೆ ಸರಿಯಾಗಿ ಬಿತ್ತನೆ ಮಾಡಿಲ್ಲ. ಅಲ್ಪಸ್ವಲ್ಪ ಮಳೆಗೆ ಹಾಗೂ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿದ ಶೇಂಗಾ, ಗೋವಿನಜೋಳ, ಸೂರ್ಯಕಾಂತಿ ಮೊದಲಾದ ಬೆಳೆಗಳು ರೋಗಬಾಧೆಗೆ ತುತ್ತಾಗುತ್ತಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ರೈತರ ನೆರವಿಗೆ ಬರಬೇಕು.ಚನ್ನಪ್ಪ ಹಳ್ಳಿ , ಚಂದ್ರಶೇಖರ ಮಜ್ಜಿಗಿ, ರೈತರು

ಬೆಳೆ ಪ್ರಾರಂಭ ಹಂತದಲ್ಲಿರುವ ಕೀಟ ಮತ್ತು ರೋಗ ಬಾಧೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಬೆಳೆ ಕಟಾವು ಹಂತಕ್ಕೆ ಬಂದಾಗ ನಿಯಂತ್ರಿಸುವುದು ಕಷ್ಟ. ರೋಗ ನಿಯಂತ್ರಣಕ್ಕೆ ಪೂರಕವಾದ ಔಷಧ ರೈತ ಸಂಪರ್ಕ ಕೇಂದ್ರಗಳಲ್ಲಿವೆ. ರೈತರು ಸಮರ್ಪಕ ಮಾಹಿತಿ ಪಡೆದುಕೊಂಡು ಔಷಧ ಸಿಂಪಡಿಸಬೇಕು. ಈ ಬಗ್ಗೆ ರೈತರಿಗೆ ತಿಳುವಳಿಕೆ ನೀಡಲಾಗುವುದು.ವೆಂಕಟೇಶಮೂರ್ತಿ ಟಿ.ಸಿ. ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net