

ಸೋಮವಾರಪೇಟೆ: ಸಮೀಪದ ಕಾಜೂರು ಗ್ರಾಮದಲ್ಲಿ ಗೋದಾಮಿನಲ್ಲಿ ಶೇಖರಿಸಿದ್ದ ಕರಿಮೆಣಸಿನ ಚೀಲಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಕಾಜೂರು ಗ್ರಾಮದ ಟಿ.ಆರ್.ವಿಜಯಕುಮಾರ್ ಅವರು ತಮ್ಮ ಮನೆಯ ಪಕ್ಕದಲ್ಲಿರುವ ಕಾರು ಶೆಡ್‌ನಲ್ಲಿ ಸುಮಾರು 15ಕ್ಕೂ ಅಧಿಕ ಚೀಲಗಳಲ್ಲಿ ಕರಿಮೆಣಸು ತುಂಬಿಸಿಟ್ಟಿದ್ದರು. ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಶೆಡ್‌ನಿಂದ ಕರಿಮೆಣಸು ಚೀಲವನ್ನು ಕಳವು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಜೋರಾಗಿ ಕೂಗಿಕೊಂಡ ಸಂದರ್ಭ ಆರೋಪಿಯೊಬ್ಬ ಚೀಲವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ. ಒಂದೆರಡು ಕ್ಷಣದಲ್ಲಿಯೇ ಅಶೋಕ್ ಲೈಲ್ಯಾಂಡ್ ವಾಹನ ರಸ್ತೆಯಲ್ಲಿ ಚಲಿಸಿದ್ದು, ಸಂಶಯಗೊಂಡ ವಿಜಯಕುಮಾರ್ ಅವರು ಸಹೋದರ ಸುದೇವ್ ಅವರೊಂದಿಗೆ ಕಾರಿನಲ್ಲಿ ಹಿಂಬಾಲಿಸಿದ ಸಂದರ್ಭ ಐಗೂರು ಗುಳಿಗಪ್ಪ ದೇವಾಲಯದ ಸಮೀಪ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಲೈಲ್ಯಾಂಡ್ ವಾಹನ ಡಿಕ್ಕಿಯಾಗಿದೆ. ಈ ಸಂದರ್ಭ ವಾಹನದಲ್ಲಿದ್ದ ಇತರ ಮೂವರು ಪರಾರಿಯಾಗಿದ್ದು, ಚಾಲಕನನ್ನು ಹಿಡಿದು ವಿಚಾರಿಸಿದಾಗ ಕೊಣನೂರಿನ ಮಣಿಕಂಠ ಎಂದು ತಿಳಿಸಿದ್ದಾನೆ. ನಂತರ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಲಾಗಿದೆ. ಸ್ಥಳದಿಂದ ಓಡಿ ಪರಾರಿಯಾಗಿರುವ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ವಾಹನದಲ್ಲಿದ್ದ ಒಂದು ಚೀಲ ಕರಿಮೆಣಸನ್ನು ವಶಪಡಿಸಿಕೊಳ್ಳಲಾಗಿದೆ.