

ಸಿದ್ದಾಪುರ: ಇಲ್ಲಿಯ ಶಂಕರಮಠದ ಸಮುಚ್ಚಯ ಹಾಗೂ ಹೊಸೂರಿನ ಜನತಾ ಕಾಲನಿಯಲ್ಲಿ ಕರಿ (ಕರ್ಚೆ) ಮಂಗಗಳ ಕಾಟ ವಿಪರೀತವಾಗಿದೆ. ಕೂಡಲೇ ಅವುಗಳನ್ನು ನಿಯಂತ್ರಿಸುವಂತೆ ಜನತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಕರಿಮಂಗಗಳು ನಿತ್ಯವೂ ಮನೆಗಳಿಗೆ ಲಗ್ಗೆ ಇಟ್ಟು ಮನೆಯಲ್ಲಿರುವ ಆಹಾರ ಪದಾರ್ಥಗಳನ್ನು ಲೂಟಿ ಮಾಡುವುದರೊಂದಿಗೆ ಚಿಕ್ಕ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ. ಜನತೆಗೆ ಮಾತ್ರವಲ್ಲ ಜಾನುವಾರುಗಳಿಗೂ ಈಗ ತೊಂದರೆ ನೀಡಲಾರಂಭಿಸಿದೆ.
ಇಲ್ಲಿಯವರೆಗೆ ಸಾಮಾನ್ಯವಾಗಿ ಮಂಗಗಳು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುವುದರೊಂದಿಗೆ ಮನೆಗಳ ಹೆಂಚನ್ನು ತೆಗೆದು ಮನೆಗಳಿಗೆ ನುಗ್ಗಿ ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದವು. ಆದರೆ, ಈಗ ಕಾಲ ಬದಲಾದ ಹಾಗೆ ಆಕಳುಗಳ ಮೇಲೆ ತಮ್ಮ ಉಪಟಳವನ್ನು ಪ್ರಾರಂಭಿಸಿವೆ. ಅಲ್ಲದೆ, ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯ ಶಂಕರಮಠದ ಸಮೀಪ ರಸ್ತೆಯಲ್ಲಿ ಓಡಾಡುವ ವಾಹನಗಳ ಮೇಲೆ, ಪಾದಾಚಾರಿಗಳ ಮೇಲೆ ಹರಿಹಾಯುತ್ತಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಮನೆಯ ಸುತ್ತಮುತ್ತ ಮೇವಿಗೆ ಬಿಟ್ಟ ಆಕಳುಗಳ ಮೇಲೆ ಹರಿಹಾಯ್ದು ಅವುಗಳಿಗೆ ಗಾಯಗೊಳಿಸುತ್ತಿವೆ ಎಂದು ಸ್ಥಳೀಯರು ಆತಂಕಿತರಾಗಿ ಹೇಳುತ್ತಾರೆ.
ನವರಾತ್ರಿ ಉತ್ಸವ ನಿಮಿತ್ತ ವಿವಿಧ ದೇವಾಲಯಕ್ಕೆ ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ತೆರಳುವುದರಿಂದ ಅವರುಗಳಿಗೆ ಅಪಾಯವಾಗುವ ಸಾಧ್ಯತೆ ಇದೆ. ಈ ಕುರಿತು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಮಂಗಗಳ ಉಪಟಳ ಹೆಚ್ಚಾಗಿರುವುದರಿಂದ ಅವುಗಳನ್ನು ನಿಯಂತ್ರಿಸುವಂತೆ ಈಗಾಗಲೇ ವಲಯ ಅರಣ್ಯಾಧಿಕಾರಿಗಳು, ಸ್ಥಳೀಯ ಪಪಂ ಮುಖ್ಯಾಧಿಕಾರಿಗಳು, ತಹಸೀಲ್ದಾರರು ಹಾಗೂ ತಾಪಂ ಇಒ ಅವರಿಗೆ ಮನವಿ ನೀಡಲಾಗಿದೆ. ಮಂಗಗಳನ್ನು ನಿಯಂತ್ರಿಸದಿದ್ದರೆ ಅಪಾಯವಾಗುವ ಸಾಧ್ಯತೆ ಇದ್ದು, ಜೀವಕ್ಕೂ ತೊಂದರೆ ಆಗಬಹುದು. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು. | ವಿಜಯ ಹೆಗಡೆ ದೊಡ್ಮನೆ ಧರ್ವಧಿಕಾರಿ, ಶೃಂಗೇರಿ ಶಂಕರ ಮಠ