ಕಪ್ಪುಬಂಗಾರಕ್ಕೀಗ ಉತ್ತಮ ದರ

kalumenasu
Published on

ಶಿರಸಿ: ವಿಯೆಟ್ನಾಂ ದೇಶದಿಂದ ಈ ಬಾರಿ ಕಾಳುಮೆಣಸಿನ ಅಕ್ರಮ ಆಮದು ಕಡಿಮೆಯಾಗಿದ್ದು, ಸ್ಥಳೀಯ ಕಾಳುಮೆಣಸಿಗೆ ಉತ್ತಮ ದರ ದೊರೆಯುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲೂ ಕಾಳುಮೆಣಸಿನ ಕೊರತೆ ಇರುವುದರಿಂದ ದರ ಸ್ಥಿರವಾಗುವ ಆಶಾಭಾವನೆ ಮೂಡಿಸಿದೆ.

ಕಪ್ಪು ಬಂಗಾರ ಎಂದೇ ಕರೆಸಿಕೊಳ್ಳುವ ಕಾಳುಮೆಣಸಿಗೆ ಕಳೆದ ವರ್ಷ ಈ ದಿನಗಳಲ್ಲಿ ಪ್ರತಿ ಕ್ವಿಂಟಾಲ್ಗೆ 45ರಿಂದ 49 ಸಾವಿರ ರೂ. ದರವಿತ್ತು. ಈ ವರ್ಷ ಸರಾಸರಿ 65 ಸಾವಿರ ರೂ. ದರವಿದೆ. ಹಣ್ಣಾದ ಕಾಳುಮೆಣಸನ್ನು ಕೊಯ್ದು ಸಿದ್ಧಪಡಿಸಿದ ಬೋಳುಕಾಳು ಪ್ರತಿ ಕ್ವಿಂಟಾಲ್ಗೆ 95 ಸಾವಿರ ರೂ. ವರೆಗೂ ದರ ಪಡೆದುಕೊಳ್ಳುತ್ತಿದೆ.

ಉತ್ತರ ಕನ್ನಡದಲ್ಲಿ ಬೆಳೆಯುವ ಕಾಳು ಮೆಣಸು ಸುವಾಸನೆ, ರುಚಿಯಲ್ಲೂ ಶ್ರೇಷ್ಠವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಕಾಳುಮೆಣಸಿಗೆ ದರ ಬರುತ್ತದೆ ಎಂಬುದು ರೈತರ ಅನುಭವದ ಮಾತು. ಈ ಹಿನ್ನೆಲೆಯಲ್ಲಿ ರೈತರು ಬೆಳೆದ ಕಾಳು ಮೆಣಸನ್ನು ದಾಸ್ತಾನಿಟ್ಟುಕೊಂಡು ನಾಲ್ಕಾರು ವರ್ಷಗಳ ಕಾಲ ದರಕ್ಕಾಗಿ ಕಾಯುವ ರೂಢಿ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾಳು ಮೆಣಸು ವಿದೇಶಗಳಿಂದ ಅಕ್ರಮವಾಗಿ ಆಮದಾದ ಕಾರಣ ಸ್ಥಳೀಯ ಕಾಳುಮೆಣಸಿಗೆ ಬೇಡಿಕೆ ಕುಸಿದಿತ್ತು. ಅಲ್ಲದೆ, ಸ್ಥಳೀಯ ಕಾಳು ಮೆಣಸನ್ನು ವಿದೇಶದ ಕಳಪೆ ಗುಣಮಟ್ಟದ ಕಾಳುಮೆಣಸಿನೊಂದಿಗೆ ಬೆರೆಸಿ ಮಾರುಕಟ್ಟೆಗೆ ಕಳಿಸಿದ್ದರಿಂದ ಮಾರುಕಟ್ಟೆ ದರದ ಮೇಲೂ ಪರಿಣಾಮ ಬೀರಿತ್ತು.

ವಿಯೆಟ್ನಾಂ ದೇಶ ಕಾಳುಮೆಣಸು ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ನಮ್ಮಲ್ಲಿಯ ಗುಣಮಟ್ಟ ಇಲ್ಲದಿದ್ದರೂ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಉತ್ತರದ ವ್ಯಾಪಾರಿಗಳು ವಿಯೆಟ್ನಾಂ ಕಾಳುಮೆಣಸು ಖರೀದಿಸುತ್ತಿದ್ದರು. ವ್ಯಾಪಾರಸ್ಥರ ಅಭಿಪ್ರಾಯದಂತೆ ಈ ವರ್ಷ ವಿಯೆಟ್ನಾಂ ದೇಶದಲ್ಲಿ ಕಾಳುಮೆಣಸು ಬೆಳೆ ಕಡಿಮೆ ಇದೆ. ಹೀಗಾಗಿ, ಅಲ್ಲಿಂದ ಅಕ್ರಮವಾಗಿ ಆಮದಾಗುವುದು ಕಡಿಮೆಯಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ ಸಹ ಅಡಕೆ ಜತೆ ಕಾಳುಮೆಣಸಿನ ಅಕ್ರಮ ಆಮದಿನ ಮೇಲೆ ಕಟ್ಟು ನಿಟ್ಟಿನ ನಿಗಾ ವಹಿಸಿದೆ. ಇದು ದೇಶೀ ಕಾಳುಮೆಣಸು ಬೆಳೆಗಾರರಿಗೆ ನೆಮ್ಮದಿ ಮೂಡಿಸಿದೆ.

ಕಳೆದ ಮಳೆಗಾಲದಲ್ಲಿ ಅಬ್ಬರದ ಮಳೆಯಿಂದಾಗಿ ಕಾಳುಮೆಣಸಿನ ಬಳ್ಳಿಗಳಿಗೂ ಕೊಳೆ ರೋಗ ಆವರಿಸಿತ್ತು. ಹೀಗಾಗಿ, ಈ ವರ್ಷ ಶೇ. 40ರಷ್ಟು ಬೆಳೆ ಕೊಳೆ ರೋಗದಿಂದಾಗಿ ಹಾನಿಯಾಗಿದೆ. ಕೆಲವೆಡೆ ಕಾಳುಮೆಣಸಿನ ಬಳ್ಳಿಗಳು ನಾಶವಾಗಿವೆ. ಅಂದಾಜಿನ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕವಾಗಿ 8 ಲಕ್ಷ ಕ್ವಿಂಟಾಲ್‌ಗಳಷ್ಟು ಕಾಳುಮೆಣಸು ಉತ್ಪಾದನೆ ಆಗುತ್ತದೆ. ಈ ಬಾರಿ ಕೊಳೆ ರೋಗದಿಂದಾಗಿ 6 ಲಕ್ಷ ಕ್ವಿಂಟಾಲ್ ಉತ್ಪಾದನೆಯಾಗಿದ್ದು, ಬೇಡಿಕೆ ಸಹಜವಾಗಿ ಏರಿಕೆಯಾಗಿದೆ.

ಕಾಳುಮೆಣಸು ವರ್ಷಕ್ಕೆ ಒಂದು ಬೆಳೆ ಮಾತ್ರ ತೆಗೆಯಲು ಸಾಧ್ಯವಾಗಿದ್ದರಿಂದ ಈ ವರ್ಷ ವಿಯೆಟ್ನಾಂ ದೇಶದಿಂದ ಮತ್ತೆ ಕಾಳು ಮೆಣಸು ಬರುವ ಸಾಧ್ಯತೆ ಇಲ್ಲ. ಹೀಗಾಗಿ ಈ ವರ್ಷ ಪೂರ್ತಿ ಇದೇ ದರ ಸ್ಥಿರವಾಗಿರಬಹುದು. ಕಾಫಿ ಬೆಳೆಯುವ ಪ್ರದೇಶವಾದ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಬೆಳೆ ಕಡಿಮೆ ಇದೆ. ಇದರಿಂದ ಜಿಲ್ಲೆಯ ಕಾಳುಮೆಣಸಿನ ದರ, ಬೇಡಿಕೆಗೆ ತೊಂದರೆ ಆಗಲಿಕ್ಕಿಲ್ಲ ಎನ್ನುತ್ತಾರೆ ವಿಶ್ಲೇಷಕರು.

ಸ್ಪೈಸ್ ಬೋರ್ಡ್ ಪಟ್ಟಿಯಲ್ಲಿ ಜಿಲ್ಲೆಯ ದರ...

ಜಿಲ್ಲೆಯಲ್ಲಿ ಕಾಳು ಮೆಣಸು ಪ್ರಧಾನ ಬೆಳೆಯಾಗಿದ್ದರೂ ಇದುವರೆಗೂ ಸ್ಪೈಸ್ ಬೋರ್ಡ್‌ನ ವೆಬ್ಸೈಟ್‌ಗಳಲ್ಲಿ ಜಿಲ್ಲೆಯ ಕಾಳು ಮೆಣಸು ದರ ದಾಖಲಾಗುತ್ತಿರಲಿಲ್ಲ. ಪ್ರತಿ ದಿನ ನೂರಾರು ಕ್ವಿಂಟಾಲ್ ಕಾಳುಮೆಣಸು ಇಲ್ಲಿಯ ಸಹಕಾರಿ ಸಂಘಗಳಲ್ಲಿ ಟೆಂಡರ್ ಮೂಲಕ ಮಾರಾಟವಾದರೂ ಹೊರ ಜಗತ್ತಿಗೆ ಶಿರಸಿ ಕಾಳುಮೆಣಸಿನ ದರ ಗೊತ್ತಾಗುತ್ತಿರಲಿಲ್ಲ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೋಯೆಲ್ ಅವರನ್ನು ಭೇಟಿ ಮಾಡಿದ್ದಾಗ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದರು. ಇದರ ಫಲವಾಗಿ ವೆಬ್‌ಸೈಟ್‌ನಲ್ಲಿಯೂ ಜಿಲ್ಲೆಯ ಗುಣಮಟ್ಟದ ಕಾಳುಮೆಣಸಿನ ದರ ಪಟ್ಟಿ ಲಭಿಸುತ್ತಿದೆ. ಅಗತ್ಯವುಳ್ಳವರು ಆನ್‌ಲೈನ್ ಮೂಲಕವೂ ದರಪಟ್ಟಿ ದರದನ್ವಯ ಕಾಳುಮೆಣಸನ್ನು ಖರೀದಿಸತೊಡಗಿದ್ದಾರೆ.

ಜಿಲ್ಲೆಯಲ್ಲಿ 5500 ಹೆಕ್ಟೇರ್ ಪ್ರದೇಶದಲ್ಲಿ ಮಿಶ್ರ ಬೆಳೆ ಮಾದರಿಯಲ್ಲಿ ಕಾಳುಮೆಣಸಿನ ಬೆಳೆ ಇದೆ. ಈಗ ದರ ಏರಿಕೆ ಆಗಿರುವುದರಿಂದ ರೈತರೂ ಕಾಳುಮೆಣಸು ಬೆಳೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. - ಸತೀಶ ಹೆಗಡೆ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net