ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಬ್ಲ್ಯಾಕ್‌ ಫಂಗಸ್ ಔಷಧಿ ಕಳವು! ವೈದ್ಯರೇ ಕಳ್ಳತನ ಮಾಡಿಬಿಟ್ಟರೇ?

victoria
Published on

ಬೆಂಗಳೂರು: ಕರೊನಾ 2ನೇ ಅಲೆಯಿಂದ ಕಂಗೆಟ್ಟು ಹೋಗಿರುವ ಜನರು ಔಷಧಿ ಇಲ್ಲದೇ ಪರದಾಡುತ್ತಿದ್ದರೆ ಮತ್ತೊಂದೆಡೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್​ಗಾಗಿ ಶೇಖರಿಸಿಟ್ಟಿದ್ದ ಔಷಧಿಯ 10 ವೈಯಲ್ಸ್‌ಗಳು ಕಳ್ಳತನ ಮಾಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ಆರ್.ಎಂ.ಓ ಆದ ಡಾ.ಶ್ರೀನಿವಾಸ್ ನೀಡಿದ ದೂರಿನ ಆಧಾರದ ಮೇಲೆ ವಿವಿಪುರ ಪೊಲೀಸರು ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಎಫ್​ಐಅರ್ ದಾಖಲಿಸಿಕೊಂಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಎಂಪಿಬಿ ಕಟ್ಟಡದ ಕೋವಿಡ್ ವಾರ್ಡ್‌ನ 7ನೇ ಮಹಡಿಯಲ್ಲಿ ಮೇ30ರಂದು ರಾತ್ರಿ 7.40 ರಿಂದ 7.45 ಗಂಟೆಯ ನಡುವೆ ‘ಲಿಪೊಸೋಮಲ್ ಆಂಫೊಟೆರಿಸಿನ್ ಬಿ’-10 ವೈಯಲ್ಸ್‌ಗಳು ಕಳುವಾಗಿತ್ತು. ಕರ್ತವ್ಯದಲ್ಲಿದ್ದ ವೈದ್ಯರಾದ ಇಎನ್‌ಟಿ ತಜ್ಞೆ ಡಾ. ಸಹನಾ ಅವರು ಬಂದು ಪರಿಶೀಲಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ಇವರು ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ವಿಕ್ಟೋರಿಯಾ ಇಎನ್‌ಟಿ ವಿಭಾಗದ ಮುಖ್ಯಸ್ಥರು ಕಳುವಾಗಿರುವ ಬಗ್ಗೆ ಆರ್‌ಎಂಒ ಡಾ.ಶ್ರೀನಿವಾಸ್‌ಗೆ ಪತ್ರದ ಮೂಲಕ ಮಾಹಿತಿ ಕೊಟ್ಟಿದ್ದಾರೆ.

ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8ಗಂಟೆಯ ವರೆಗೆ ಇದ್ದ ಶಿಫ್ಟ್​ನಲ್ಲಿ ಬಳಕೆ ಆಗದ ‘ಲಿಪೊಸೋಮಲ್ ಆಂಫೊಟೆರಿಸಿನ್ ಬಿ’-43 ಔಷಧಿಗಳಿದ್ದವು. ರಾತ್ರಿ 7.20ರಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಡಾ. ಪ್ರಣವ್, ಇಎನ್‌ಟಿ ಆಪ್ತೋಲೊಮಜಿ ವೈದ್ಯೆ ಡಾ.ಸಂಜನಾ ಹಾಗೂ ಸಿಬ್ಬಂದಿ ರಮೇಶ್ ಸಮ್ಮುಖದಲ್ಲಿ ಔಷಧಿಗಳಿದ್ದ ಲಾಕರ್‌ನ್ನು ಪರಿಶೀಲಿಸಲಾಗಿತ್ತು. ಆ ವೇಳೆ ಎಲ್ಲ ಔಷಧಿಗಳು ಸರಿಯಾಗಿ ಇದ್ದವು. ನಂತರ ಲಾಕರ್ ಕೀಯನ್ನು ನರ್ಸಿಂಗ್ ಸ್ಟೇಷನ್‌ನ ಮೇಜಿನ ಮೇಲೆ ಇಟ್ಟು ಹೋಗಿದ್ದೆವು. ಇದಾದ ಬಳಿಕ ಕರ್ತವ್ಯಕ್ಕೆ ಬಂದ ಡಾ. ಸಹನಾ ಔಷಧಿ ಕಳುವಾದ ಸಂಗತಿಯನ್ನು ನಮ್ಮ ಗಮನಕ್ಕೆ ತಂದಿದ್ದರು ಎಂಬ ಅಂಶವನ್ನು ಇಎನ್‌ಟಿ ವಿಭಾಗದ ಮುಖ್ಯಸ್ಥರು ಕೊಟ್ಟಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಡಾ.ಶ್ರೀನಿವಾಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವೈದ್ಯರಿಂದಲೇ ಕೃತ್ಯ!?

ಬ್ಲ್ಯಾಕ್‌ಫಂಗಸ್‌ಗಾಗಿ ಔಷಧಿ ಸಂಗ್ರಹಿಸಿಟ್ಟಿದ್ದ ಕೊಠಡಿಗೆ ಆಸ್ಪತ್ರೆ ವೈದ್ಯರಿಗೆ ಬಿಟ್ಟು ಸಾರ್ವಜನಿಕರಿಗೆ ಪ್ರವೇಶವಿಲ್ಲ. ಹೀಗಾಗಿ ಈ ಔಷಧಿ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಇರುವ ಆಸ್ಪತ್ರೆ ವೈದ್ಯರು ಅಥವಾ ಸಿಬ್ಬಂದಿಯೇ ಕಳ್ಳತನ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೀಗ ಕೆಲ ವೈದ್ಯರನ್ನು ವಿಚಾರಣೆ ನಡೆಸಲಾಗಿದೆ ಎಂದು ವಿವಿಪುರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net