8 ವರ್ಷಗಳ ಸಂಶೋಧನೆಯ ಫಲ

gangalli new
Published on

ಗಂಗೊಳ್ಳಿ: ವಿವಿಧ ಬಣ್ಣಗಳಲ್ಲಿ ಕಂಡುಬರುವ ಫಂಗಸ್ (ಶಿಲೀಂಧ್ರ) ಬಗ್ಗೆ ಭಯ ಅನಗತ್ಯ. ಕಪ್ಪು, ಬಿಳಿ, ಹಳದಿ ಯಾವುದೇ ಹೆಸರಿದ್ದರೂ ಫಂಗಸ್‌ಗಷ್ಟೇ ಚಿಕಿತ್ಸೆ. ಸಕಾಲಿಕ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಎಂದು ಔಷಧ ಸಂಶೋಧಕ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಿ.ಶ್ರೀಕಾಂತ ಪೈ ತಿಳಿಸಿದ್ದಾರೆ.

ಕೋವಿಡ್ ನಂತರ ಅನೇಕರಲ್ಲಿ ಕಾಣಿಸಿಕೊಂಡಿರುವ ಬ್ಲ್ಯಾಕ್ ಫಂಗಸ್ ಕಾಯಿಲೆ ವಾಸಿ ಮಾಡಲು ಬಳಸುತ್ತಿರುವ ‘ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ’ ಔಷಧವನ್ನು ಅಭಿವೃದ್ಧಿಪಡಿಸಿರುವ ಭಾರತ ಸೀರಮ್ಸ್ ಆ್ಯಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪನಿಯ ಸಂಶೋಧಕ ತಂಡದ ನೇತೃತ್ವ ವಹಿಸಿದ್ದ ಶ್ರೀಕಾಂತ ಪೈ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

8 ವರ್ಷಗಳ ಶ್ರಮ: 60 ವರ್ಷಗಳಿಂದ ಶಿಲೀಂಧ್ರ ಸಮಸ್ಯೆ ನಿವಾರಣೆಗೆ ಅಮೆರಿಕ ಮೂಲದ ‘ಆ್ಯಂಪೋಟೆರಿಸಿನ್’ ಬಳಸಲಾಗುತ್ತಿತ್ತು. ಇದರ ಹಕ್ಕುಸ್ವಾಮ್ಯ 2008ರಲ್ಲಿ ಮುಕ್ತಾಯವಾಗಿತ್ತು. ಬಳಿಕ ಯಾರು ಬೇಕಿದ್ದರೂ ಉತ್ಪಾದಿಸಬಹುದಾಗಿದ್ದರೂ, ಭಾರತದಲ್ಲಿ ತಂತ್ರಜ್ಞಾನ ಇರಲಿಲ್ಲ. ಹಾಗಾಗಿ ಪೇಟೆಂಟ್ ಮುಗಿಯುವ ಮೊದಲೇ 2004ರಲ್ಲಿ ಸಂಶೋಧನೆ ಆರಂಭಿಸಿದೆವು.

ಆ್ಯಂಪೊಟೆರಿಸಿನ್ ಉತ್ಪನ್ನದ ಮರು ಅಭಿವೃದ್ಧಿಗೆ ಸಂಬಂಧಿಸಿ ಯಾವುದೇ ಮಾರ್ಗಸೂಚಿ, ತಂತ್ರಜ್ಞಾನದ ಮಾಹಿತಿ ನಮಗೆ ಸಿಕ್ಕಿರಲಿಲ್ಲ. ಮೂಲ ಉತ್ಪನ್ನದ ಫಾರ್ಮುಲಾ ಸಾಧಕ ಬಾಧಕಗಳ ಅಧ್ಯಯನ, ಪ್ರಾಣಿಗಳ ಮೇಲೆ ಪ್ರಯೋಗ ಇತ್ಯಾದಿ ನಡೆಸಿ ಉತ್ಪನ್ನ ತಯಾರಿಸಿದೆವು. ಅಧ್ಯಯನಕ್ಕೆ ಅಗತ್ಯ ಉಪಕರಣಗಳು ನಮ್ಮ ದೇಶದಲ್ಲಿರದ ಕಾರಣ ಇಟಲಿಗೆ ಹೋಗಿ ಪರೀಕ್ಷಿಸಿದೆವು. ಅನಂತರ ಹೈದರಾಬಾದ್, ಮುಂಬೈ ಲ್ಯಾಬ್‌ಗಳಲ್ಲಿ ಸಂಶೋಧನೆ ಮುಂದುವರಿಸಿದೆವು. 8 ವರ್ಷಗಳ ಅಧ್ಯಯನದ ಬಳಿಕ 2012ಕ್ಕೆ ಪೂರ್ಣ ಪ್ರಮಾಣದ ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ ತಯಾರಾಯಿತು ಎಂದು ಶ್ರೀಕಾಂತ ಪೈ ವಿವರಣೆ ನೀಡಿದರು.

ಆ್ಯಂಪೊಟೆರಿಸಿನ್ ಬಿ ಚುಚ್ಚು ಮದ್ದುಗಳ ಮೂಲ. ಇದನ್ನು ಬಳಸಿಕೊಂಡು ನಾಲ್ಕು ಬಗೆಯ ಚುಚ್ಚುಮದ್ದುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲನೆಯದು ಸಾಂಪ್ರದಾಯಿಕ ಉತ್ಪನ್ನ. ಆ ಬಳಿಕ ಲೈಪೋಸೋಮಲ್ ‘ಆ್ಯಂಪೊ ಟೆರಿಸಿನ್ ಬಿ ಇಂಜೆಕ್ಷನ್’ ಕಂಡು ಹಿಡಿಯಲಾಯಿತು. ಇದು ಮೊದಲು ನೀಡುತ್ತಿದ್ದ ಔಷಧಕ್ಕಿಂತ 75 ಪಟ್ಟು ಹೆಚ್ಚು ಸುರಕ್ಷತಾ ಪ್ರೊಫೈಲ್ ಹೊಂದಿದೆ. ಮೂರನೆಯದಾಗಿ ‘ಆ್ಯಂಪೊಟೆರಿಸಿನ್‌ಬಿ ಲಿಪಿಡ್ ಕಾಂಪ್ಲೆಕ್ಸ್’ (ಅಬೆಲ್ಸೆಟ್). ಇದು ಎರಡನೆಯ ಇಂಜೆಕ್ಷನ್‌ಗಿಂತ 20 ಪಟ್ಟು ಹೆಚ್ಚಿನ ಪರಿಣಾಮಕಾರಿ. ಬಳಿಕ ‘ಆ್ಯಂಪೊಟೆರಿಸಿನ್ ಬಿ ಎಮಲ್ಷನ್’ ಅನ್ನು ಅಗ್ಗದ ದರದಲ್ಲಿ ಸಿಗುವಂತೆ ಅಭಿವೃದ್ಧಿಪಡಿಸಲಾಯಿತು. ಇದು ಮಾಮೂಲಿ ಇಂಜೆಕ್ಷನ್‌ಗಿಂತ 150 ಪಟ್ಟು ಪರಿಣಾಮಕಾರಿ. ಆರ್ಥಿಕವಾಗಿಯೂ ಹೊರೆ ಅಲ್ಲ ಎಂದು ತಿಳಿಸಿದರು.

16 ಔಷಧಗಳ ಪೇಟೆಂಟ್: ವಿವಿಧ ಔಷಧ ಉತ್ಪನ್ನಗಳಿಗೆ ಸಂಬಂಧಿಸಿದ 16 ಹಕ್ಕುಸ್ವಾಮ್ಯಗಳು ಶ್ರೀಕಾಂತ ಪೈ ಹೆಸರಿನಲ್ಲಿದೆ. ಭಾರತ್ ಸೀರಮ್ಸ್‌ನಿಂದ ನಿವೃತ್ತಿ ಬಳಿಕ ಮುಂಬೈನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದು, ಫ್ರೀಲ್ಯಾನ್ಸ್ ಕನ್ಸಲ್ಟೆಂಟ್ ಆಗಿದ್ದಾರೆ. ದಿ.ಬಿ.ಅಣ್ಣಪ್ಪ ಪೈ - ದಿ. ಶಾಂತಾ ಬಾ ಅವರ 9 ಮಕ್ಕಳಲ್ಲಿ ಒಬ್ಬರಾಗಿರುವ ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಸಂಸ್ಥೆಗಳಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ, ಬೆಂಗಳೂರಿನಲ್ಲಿ ಬಿ. ಫಾರ್ಮ, ಮಣಿಪಾಲದಲ್ಲಿ ಎಂ. ಫಾರ್ಮ ಸ್ನಾತಕೋತ್ತರ ಶಿಕ್ಷಣ ಪಡೆದು ಭಾರತ್ ಸೀರಮ್ಸ್‌ನಲ್ಲಿ 17 ವರ್ಷ ಕೆಲಸ ಮಾಡಿದ್ದರು.

ಗಂಗೊಳ್ಳಿಯಂತಹ ಪುಟ್ಟ ಗ್ರಾಮೀಣ ಪ್ರದೇಶದಲ್ಲಿ ಆಗಿನ ಕಾಲದಲ್ಲಿ ಎಲ್ಲರಿಗೂ ಶಿಕ್ಷಣ ನೀಡುವುದು ಅಸಾಧ್ಯದ ಮಾತು. ಆದರೆ ನಮಗೆಲ್ಲರಿಗೂ ಪಾಲಕರು ಸಾಧ್ಯವಾದಷ್ಟು ಶಿಕ್ಷಣ ನೀಡಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು, ಅವರು ನೀಡಿದ ಉತ್ತಮ ಸಂಸ್ಕಾರ, ದೇವರ ಹಾಗೂ ಹಿರಿಯರ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಗಿದೆ.

- ಶ್ರೀಕಾಂತ ಪೈ, ಔಷಧ ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net