ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ

black fungus
Published on

ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತೆಯೊಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಆದರೆ, ಚಿಕಿತ್ಸೆಗೆ ಔಷಧ ಇಲ್ಲದ್ದರಿಂದ ಕರೊನಾ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನಷ್ಟೇ ನೀಡಲಾಗುತ್ತಿದೆ.
ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದ 45 ವರ್ಷದ ಮಹಿಳೆಗೆ ಬ್ಲ್ಯಾಕ್ ಫಂಗಸ್ ರೋಗ ಕಾಣಿಸಿಕೊಂಡಿದೆ. ಅವರನ್ನು ಹುಬ್ಬಳ್ಳಿ ಕಿಮ್ಸ್​ಗೆ ಕಳುಹಿಸಿದ್ದರೂ ಅಲ್ಲಿ ದಾಖಲಿಸಿಕೊಳ್ಳದೆ ವಾಪಸು ಕಳುಹಿಸಿದ್ದಾರೆ ಎನ್ನಲಾಗಿದೆ. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಔಷಧ ಜಿಲ್ಲಾಸ್ಪತ್ರೆಗೆ ಪೂರೈಕೆಯಾಗಿಲ್ಲ. ಅತ್ತ ಹುಬ್ಬಳ್ಳಿ ಕಿಮ್ಸ್​ನಲ್ಲೂ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಇದರಿಂದ ಜಿಲ್ಲೆಯ ರೋಗಿಗಳು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ. ಬ್ಲ್ಯಾಕ್ ಫಂಗಸ್ ರೋಗಕ್ಕೆ ಅವಶ್ಯವಿರುವ ಔಷಧ ಪೂರೈಸುವುದಾಗಿ ಆರೋಗ್ಯ ಹಾಗೂ ಗೃಹ ಸಚಿವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಹೇಳಿದ್ದರು. ಆದರೆ, ಈವರೆಗೂ ಅಗತ್ಯ ಔಷಧವೇ ಇಲ್ಲ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ‘ಜಿಲ್ಲಾಸ್ಪತ್ರೆಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರಲ್ಲಿ ಬ್ಲ್ಯಾಕ್ ಫಂಗಸ್ ರೋಗ ಕಾಣಿಸಿಕೊಂಡಿದೆ. ಅವರನ್ನು ಹುಬ್ಬಳ್ಳಿ
ಕಿಮ್ಸ್​ಗೆ ಕಳುಹಿಸಲಾಗಿತ್ತು. ಆದರೆ, ಅಲ್ಲಿಂದ ವಾಪಸು ಕಳುಹಿಸಿದ್ದಾರೆ. ಸದ್ಯ ಅವರಿಗೆ ಕರೊನಾ ಟ್ರೀಟ್​ವೆುಂಟ್ ಮಾತ್ರ ಮುಂದುವರಿಸಲಾಗಿದೆ. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಔಷಧ ಬಂದಿಲ್ಲ. ಇಂಡೆಂಟ್ ಹಾಕಿದ್ದು, ಬಂದ ಮೇಲೆ ಚಿಕಿತ್ಸೆ ನೀಡಲಾಗುವುದು’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net