ಹುಬ್ಬಳ್ಳಿ: ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಶೀಘ್ರ ನಿರ್ಣಯ ಕೈಗೊಳ್ಳದಿದ್ದಲ್ಲಿ ಆಗಸ್ಟ್ 15ರಂದು ಜಿಲ್ಲಾ ಕೇಂದ್ರಗಳಲ್ಲಿ ಸಚಿವರಿಗೆ ಹಾಗೂ ಕಾಂಗ್ರೆಸ್ ಶಾಸಕರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಮಾಜಿ ಸಚಿವ, ಕರ್ನಾಟಕ ರಾಜ್ಯ ಆದಿ ಜಾಂಭವ ಮಾದಿಗರ ಸಂಘದ ಅಧ್ಯಕ್ಷ ಹನುಮಂತಪ್ಪ ಅಲ್ಕೋಡ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪು ಬಾವುಟ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿದರೆ ನಮ್ಮ -ನಮ್ಮ ಮನೆಯ ಮೇಲೆ ಕಪ್ಪು ಬಾವುಟ ಹಾರಿಸುವ ಮೂಲಕ ಹೋರಾಟ ಮುಂದುವರಿಸುತ್ತೇವೆ ಎಂದರು.
ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಒಳ ಮೀಸಲಾತಿಯನ್ನು ಜಾರಿಗೆ ಮಾಡಲು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಣಯ ಕೈಗೊಂಡಿದ್ದರು. ಆದರೆ, ನಂತರ ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿ ಕಾಲಹರಣ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಜನಾಂಗಕ್ಕೆ ಘೊರ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.