

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ನಗರದಲ್ಲಿ ಜಿಲ್ಲಾಡಳಿತದ ಅನುಮತಿ ನಿರಾಕರಣೆ ನಡುವೆಯೂ ನ.1ರಂದು ಕರಾಳ ದಿನ ಆಚರಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯೋತ್ಸವದ ದಿನದಂದು ನಾಡದ್ರೋಹಿ ಎಂಇಎಸ್ ಆಚರಿಸುವ ಕರಾಳ ದಿನಾಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿತು. ಆದರೆ ಪೊಲೀಸ್ ಭದ್ರತೆಯಲ್ಲೇ ನಾಡ ವಿರೋಧಿ ಚಟುವಟಿಕೆ ಕೈಗೊಳ್ಳಲು ಅವಕಾಶ ಕೊಟ್ಟಿದ್ದು ಸರಿಯಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಮೊಂಡತನ ಪ್ರದರ್ಶಿಸಿ, ಕರಾಳ ದಿನ ಆಚರಿಸಿದವರ ವಿರುದ್ಧ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೂಡಲೆ ನಾಡದ್ರೋಹಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ವಾಜೀದ್ ಹಿರೇಕೋಡಿ, ಮಹಾಂತೇಶ ರಣಗಟ್ಟಿಮಠ, ಪ್ರವೀಣ ಮಾದರ, ಶಿವು ದೇವರವರ ಇತರರಿದ್ದರು.