ಹರಿಪ್ರಸಾದ್‌ಗೆ ರಾಜಕೀಯದ ಅರಿವಿಲ್ಲ: ಸಚಿವ ಮುನಿರತ್ನ ತಿರುಗೇಟು

17 Klr 06
Published on

ಕೋಲಾರ: ನಮ್ಮನ್ನು ವೇಶ್ಯೆಯರು ಎಂದು ಕರೆದಿರುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್‌ಗೆ ರಾಜಕೀಯ ಗಂಧ ಗಾಳಿ ಗೊತ್ತಿಲ್ಲ. ಅವರಿಗೆ ತಿಳಿವಳಿಕೆ ಇದ್ದಿದ್ದರೆ ಇಂತಹ ಪದ ಬಳಕೆ ವಾಡುತ್ತಿರಲಿಲ್ಲ. ಕಾಂಗ್ರೆಸ್ಸಿಗರಿಗೂ ಸ್ಯಾಂಟ್ರೋ ರವಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು 17 ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬಂದಿದ್ದೇವೆ. ಜನ ನಮ್ಮನ್ನು ಆಯ್ಕೆ ವಾಡಿದ್ದು, ಹರಿಪ್ರಸಾದ್ ಇಂಥ ಪದ ಬಳಸಬಾರದು ಎಂದು ಎಚ್ಚರಿಸಿದರು.
ಸಮ್ಮಿಶ್ರ ಸರ್ಕಾರಕ್ಕೆ ನಮ್ಮ ಅನುಮತಿ ಕೇಳಿದ್ದರೆ?: ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭ ನವದೆಹಲಿಯಿಂದ ಬಂದ ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುವಾರ್ ನೇತತ್ವದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ನಮ್ಮನ್ನು ಕರೆದುಕೊಂಡು ಹೋಗಿ ಕುವಾರಸ್ವಾಮಿ ಎದುರು ನಿಲ್ಲಿಸಿದಾಗ ನಾವು ಏನಾಗಿದ್ದೆವು? ಸಮ್ಮಿಶ್ರ ಸರ್ಕಾರ ರಚಿಸಿ ಎಂದು ಶಾಸಕರಾದ ನಾವು ಕೇಳಿದ್ದೆವಾ? ನಾವೆಲ್ಲ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧರಿದ್ದರೂ ನಮ್ಮ ಅಭಿಪ್ರಾಯ ಆಲಿಸಿದೆ ಅವರ ಮುಂದೆ ನಮ್ಮನ್ನು ಬಿಟ್ಟ ಇವರನ್ನು ಏನೆಂದು ಕರೆಯಬೇಕು ಎಂದು ಮುನಿರತ್ನ ಪ್ರಶ್ನಿಸಿದರು.

ನೇರ ಚುನಾವಣೆ ಎದುರಿಸಿಲ್ಲ: ನೇರ ಚುನಾವಣೆ ಎದುರಿಸದ ಹರಿಪ್ರಸಾದ್‌ಗೆ ರಾಜ್ಯ ರಾಜಕಾರಣದ ಸಂಪೂರ್ಣ ಚಿತ್ರಣ ಗೊತ್ತಿಲ್ಲ. ಇಂದಿರಾ, ರಾಜೀವ್, ಸೋನಿಯಾ ಗಾಂಧಿ ಜತೆ ಕೆಲಸ ವಾಡುತ್ತ, ಅವರ ಹಿಂದೆ ಮುಂದೆ ಓಡಾಡಿಕೊಂಡು ದೆಹಲಿಯಲ್ಲೇ ಹೆಚ್ಚು ಸಮಯ ಕಳೆದವರು. 40 ವರ್ಷ ರಾಷ್ಟ್ರ ರಾಜಕಾರಣದಲ್ಲಿ ಇದ್ದು, ಈಗ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿದ್ದಾರೆ ಎಂದು ಟೀಕಿಸಿದರು.
ವರ್ತೂರು ಪ್ರಕಾಶ್ ಅವರನ್ನು ನಮ್ಮ ಪಕ್ಷ ಗೌರವಯುತವಾಗಿ ಬರವಾಡಿಕೊಂಡಿದೆ. ನಮ್ಮ ಪಕ್ಷದ ಹಿರಿಯ ಮುಖಂಡರೂ ಆಗಿರುವ ಅವರನ್ನು ಸೆಳೆಯಲು ಸಾಧ್ಯವೇ ಇಲ್ಲ. ವರ್ತೂರು ಪ್ರಕಾಶ್ ಒಳ್ಳೆಯವರು ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ಅಭಿನಂದನೆ. ಆದರೆ, ವರ್ತೂರು ಪ್ರಕಾಶ್ ಒಳ್ಳೆಯವರು ಎಂಬುದು ನಮಗೂ ಗೊತ್ತಿದೆ. ಈ ಬಗ್ಗೆ ನಮಗೆ ಅವರ ಪ್ರವಾಣಪತ್ರ ಬೇಡ. ಅವರ ವಾತನ್ನು ಗಂಭೀರವಾಗಿ ಪರಿಗಣಿಸುವುದೂ ಬೇಡ ಎಂದು ಹೇಳಿದರು.


ಸಿದ್ದರಾಮಯ್ಯ ಸೋಲಿಸಲು ಯೋಜನೆ ಬೇಡ:ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಎದುರಿಸಲು ಯೋಜನೆ ರೂಪಿಸಿದ್ದೀರಾ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ಎದುರಿಸಲು ನಮಗೆ ಯಾವುದೇ ಯೋಜನೆ ಬೇಡ. ಚಾಮುಂಡೇಶ್ವರಿಯಲ್ಲಿ ಅವರನ್ನು ಸೋಲಿಸಲು ಏನಾದರೂ ವಿಶೇಷ ಯೋಜನೆ ರೂಪಿಸಿದ್ದೆವಾ? 500 ಮತ ವ್ಯತ್ಯಾಸವಾಗಿದ್ದರೆ ಬಾದಾಮಿಯಲ್ಲೂ ಸೋಲುತ್ತಿದ್ದರು. ಇನ್ನು ಕೋಲಾರದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಲೋಕಸಭೆ ಸದಸ್ಯರು ಹೆಚ್ಚು ಮತಗಳಿಂದ ಗೆಲ್ಲಲಿಲ್ಲವೇ? ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಮುನಿರತ್ನ ಭರವಸೆ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಕೆಲವೊಮ್ಮೆ ಭವಿಷ್ಯ ಚೆನ್ನಾಗಿ ನುಡಿಯುತ್ತಾರೆ. ಅದು ನಿಜವೂ ಆಗಿದೆ. ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಇರಲ್ಲ ಎಂದಿದ್ದರು. ಅದು ನಿಜವೂ ಆಯಿತು. ಹೀಗಾಗಿ, ಸಿದ್ದರಾಮಯ್ಯ ಕುರಿತು ಹರಕೆ ಕುರಿ ಎಂಬುದಾಗಿ ಅವರು ಹೇಳಿರುವುದು ಸರಿಯಾಗಿಯೇ ಇದೆ ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್, ಮಾಜಿ ಶಾಸಕರಾದ ವೈ.ಸಂಪಂಗಿ, ಕೆ.ಎಸ್.ಮಂಜುನಾಥಗೌಡ, ಮುಖಂಡ ಓಂಶಕ್ತಿ ಚಲಪತಿ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಇತರರು ಇದ್ದರು.


ಗುತ್ತಿಗೆದಾರರ ಸಂದವರು ಕಾಂಗ್ರೆಸ್ ಬೆಂಬಲಿಗರಂತೆ ನಡೆದುಕೊಳ್ಳುತ್ತಿದ್ದಾರೆ. ಅವರ ಕಚೇರಿ ಮೇಲಿರುವ ನಾಮಫಲಕವನ್ನು ಕಾಂಗ್ರೆಸ್ ಕಚೇರಿ ಎಂದು ಬದಲಾಯಿಸಿಕೊಳ್ಳಲಿ. ಅವರು ಯಾವತ್ತಾದರೂ ಗುತ್ತಿಗೆದಾರರ ಸಮಸ್ಯೆ ಆಲಿಸಿದ್ದಾರೆಯೇ? ಗುತ್ತಿಗೆದಾರರಿಗೆ ಒಳ್ಳೆಯದು ವಾಡಿದ್ದಾರೆಯೇ?
ಮುನಿರತ್ನ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net