ಡಿಎಫ್ಒ ಕಚೇರಿಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ

IMG_20221229_115915.jpg
Published on

ದಾವಣಗೆರೆ : ವನ್ಯಜೀವಿಗಳ ಅಕ್ರಮ ಸಾಕಣೆ ಪ್ರಕರಣ ಸಂಬಂಧ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಅವರು ಡಿಎಫ್‌ಒ ಕಚೇರಿ ಬಳಿ ಬಂದಾಗ ಎರಡೂ ಗೇಟ್‌ಗಳನ್ನು ಬಂದ್ ಮಾಡಲಾಗಿತ್ತು. ಸ್ವಲ್ಪ ಹೊತ್ತು ಘೋಷಣೆಗಳನ್ನು ಕೂಗಿದ ನಂತರ ಗೇಟ್ ತಳ್ಳಿಕೊಂಡು ಆವರಣ ಪ್ರವೇಶಿಸಿದರು.
ಅಲ್ಲಿಯೇ ಧರಣಿ ಕುಳಿತ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ಡಿಎಫ್‌ಒ ಜಗನ್ನಾಥ್, ಅರಣ್ಯ ಇಲಾಖೆ ಮತ್ತು ಸಿಸಿಬಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
ವನ್ಯಜೀವಿಗಳ ಅಕ್ರಮ ಸಾಕಣೆ ಪ್ರಕರಣದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಪ್ರಮುಖ ಆರೋಪಿಯಾಗಿದ್ದು ಅವರನ್ನು ಮೊದಲು ಬಂಧಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.
ನಿಜವಾದ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇಬ್ಬರು ಅಮಾಯಕರನ್ನು ಬಲಿಪಶು ಮಾಡಲಾಗಿದೆ. ಡಿಎಫ್‌ಒ ಜಗನ್ನಾಥ್, ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಮುಂಬರುವ ದಿನಗಳಲ್ಲಿ ವಿಧಾನಸೌಧದ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ದ್ವೇಷದ ರಾಜಕಾರಣ ಮಾಡುತ್ತಿಲ್ಲ, ವನ್ಯಜೀವಿಗಳಿದ್ದ ಜಾಗ ಮಲ್ಲಿಕಾರ್ಜುನ್ ಅವರದೇ ಎಂಬುದಕ್ಕೆ ತಮ್ಮ ಬಳಿ ದಾಖಲೆಗಳಿವೆ. ಒಂದು ವೇಳೆ ಸಾಕಣೆಗೆ ಅವರ ಬಳಿ ಅನುಮತಿ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ಕಾನೂನು ಬಾಹಿರ ಕೃತ್ಯ ನಡೆದಿದ್ದರೂ ಡಿಎಫ್‌ಒ ಜಗನ್ನಾಥ್ ಕಣ್ಣಾಮುಚ್ಚಾಲೆ ಆಡುತ್ತಿದ್ದು ಪ್ರಮುಖ ಆರೋಪಿಯನ್ನು ರಕ್ಷಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net