ನವ 'ಶಕ್ತಿ' ಪ್ರದರ್ಶನಕ್ಕೆ ಕಮಲಪಡೆ ಸಜ್ಜು
ವೇದಿಕೆಯತ್ತ ಆಗಮಿಸುತ್ತಿರುವ ಜನತೆ

IMG_20221120_094104.jpg
Published on

ಬಳ್ಳಾರಿ: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಟಾಂಗ್ ನೀಡುವುದು ಹಾಗೂ ಪರಿಶಿಷ್ಟ ಜಾತಿ, ಪಂಗಡ ಮೀಸಲು ಹೆಚ್ಚಳದ ಲಾಭ ಗಳಿಕೆ ದೃಷ್ಟಿಯಿಂದ ಬಳ್ಳಾರಿಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ನವಶಕ್ತಿ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸುಮಾರು ಹತ್ತು ಲಕ್ಷ ಜನರು ಆಗಮಿಸುವ ನಿರೀಕ್ಷೆ ಹೊಂದಿದ್ದು, ಪೂರಕವೆಂಬಂತೆ ಬೆಳಗ್ಗೆಯಿಂದಲೇ ನಾಡಿನ ನಾಲ್ಕು ದಿಕ್ಕುಗಳಿಂದ ಜನರು ಸಮಾವೇಶ ನಡೆವ ಜಿ ಸ್ಕ್ವೇರ್ ಮೈದಾನದತ್ತ ಆಗಮಿಸುತ್ತಿದ್ದಾರೆ. ವೇದಿಕೆಗೆ ಎರಡು ಕಿ.ಮೀ.ದೂರದಿಂದಲೇ ಜನರ ಸ್ವಾಗತಕ್ಕೆ ಕಲಾ ತಂಡಗಳನ್ನು ನಿಯೋಜಿಸಿದ್ದು ದಾರಿಯುದ್ದಕ್ಕೂ ವಿವಿಧ ಕಲಾವಿದರ ನರ್ತನ, ರಾಮಾಯಣದ ದೃಶ್ಯಗಳನ್ನು ಬಿಂಬಿಸುವ ಮೂಲಕ ಜನರನ್ನು ಆಕರ್ಷಿಸುತ್ತಿದ್ದಾರೆ. ಇಡೀ ಬಳ್ಳಾರಿ ನಗರ ಕೇಸರಿಮಯವಾಗಿದ್ದು, ಎಲ್ಲೆಡೆ ಬ್ಯಾನರ್, ಬಿಜೆಪಿ ಬಾವುಟಗಳೇ ಕಂಡು ಬರುತ್ತಿವೆ.

ಮುಖ್ಯ ದ್ವಾರದಿಂದ ವೇದಿಕೆವರೆಗೆ ಬಾಳೆದಿಂಡು ಹಾಗೂ ಕಬ್ಬಿನ ಜಲ್ಲೆಯನ್ನು ಎರಡೂ ಬದಿಯಲ್ಲಿ ಅಲಂಕರಿಸಲಾಗಿದೆ. ವೇದಿಕೆ ಬಲಭಾಗದಲ್ಲಿ ಊಟದ ವ್ಯವಸ್ಥೆ ಮಾಡಿದ್ದು, ಬೆಳಗ್ಗೆ ಉಪಹಾರ ಸವಿದ ಜನರು ವೇದಿಕೆ ಆಗಮಿಸಿ ಆಸನಗಳಲ್ಲಿ ಆಸೀನರಾಗುತ್ತಿದ್ದಾರೆ. ಆಗಮಿಸಿದ ಜನರಿಗೆ ವೇದಿಕೆ ಬಳಿ ಟಿ ಶರ್ಟ್ ವಿತರಿಸುತ್ತಿದ್ದು, ಜನರು ಪಡೆಯಲು ಮುಗಿಬಿದ್ದಿದ್ದು ಕಂಡುಬಂತು. ಇನ್ನು ಕೆಲವರು ಕಿತ್ತಾಡಿಕೊ‌ಂಡರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಸೇರಿ ಕೇಂದ್ರ, ರಾಜ್ಯ ಮಂತ್ರಿಗಳು ಆಗಮಿಸುತ್ತಿದ್ದು ಸಮಾವೇಶ ಎಲ್ಲರ ಗಮನ ಸೆಳೆಯುವಂತಾಗಿದೆ.

ಭೂರಿ ಬೋಜನ ವ್ಯವಸ್ಥೆ
ಸಮಾವೇಶಕ್ಕೆ ಬರುವ ಲಕ್ಷಾಂತರ ಜನರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ ಕೇಸರಿಬಾತ್ ಹಾಗೂ ಉಪ್ಪಿಟ್ಟು ಉಪಹಾರ ನೀಡಲಾಗಿದೆ. ಮಧ್ಯಹ್ನ ಪಾಯಸ, ಪಲಾವ್, ಅನ್ನ ಸಾಂಬಾರ್, ಮೊಸರನ್ನ ತಯಾರಿಸಲಾಗುತ್ತಿದೆ. 1300 ಬಾಣಸಿಗರಿಂದ ಅಡುಗೆ ತಯಾರಿ ನಡೆದಿದೆ. ಊಟ ಬಡಿಸಲು1600 ಜನರನ್ನು ನಿಯೋಜಿಸಲಾಗಿದೆ.100 ಟನ್ ಅಕ್ಕಿ, 8 ಟನ್ ಬೆಲ್ಲ, 8 ಟನ್ ಗೋಧಿ, 100 ಟನ್ ತರಕಾರಿ, ಐದು ಸಾವಿರ ತೆಂಗಿನಕಾಯಿ, 1000 ಸಿಲಿಂಡರ್ ಬಳಕೆ. ಐದು ಎಕರೆ ಜಾಗದಲ್ಲಿ 600 ಕೌಂಟರ್  ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net