ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಗೆಲುವು

devaraja shetty
ಎಂ.ಆರ್.ದೇವರಾಜ್ ಶೆಟ್ಟಿ
Published on

ಚಿಕ್ಕಮಗಳೂರು: ಕಾರ್ಯಕರ್ತರ ಸತತ ಪ್ರಯತ್ನದಿಂದ ನಿರೀಕ್ಷೆಗೂ ಮೀರಿ ಎನ್‌ಡಿಎ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಹೇಳಿದರು.
ಪ್ರೆಸ್‌ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕದನದಲ್ಲಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಸ್ಪರ್ಧಿಸಿ 2.50 ಲಕ್ಷಕ್ಕೂ ಹೆಚ್ಚು ಮತಗಳ ಅಂತರ ದಿಂದ ಗೆಲುವು ಸಾಧಿಸಿ ಲೋಕಸಭೆಗೆ ತೆರಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಸಂಪೂರ್ಣ ಮತಗಳನ್ನು ಪಡೆಯುವ ಅತಿಯಾದ ಹುರುವಿನಿಂದ ರಾಜ್ಯದಲ್ಲಿ ಎರಡಂಕಿಯನ್ನು ದಾಟದೇ ಹೀನಾಯ ಸೋಲು ಅನುಭವಿಸಿದೆ. ಚಿಕ್ಕಮಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಕಾರ್ಯಪ್ರವೃತ್ತರಾದರೂ ಅಲ್ಲಿ ಬಹುಪಾಲು ಮತಗಳನ್ನು ಬಿಜೆಪಿ ಪಡೆದುಕೊಂಡಿದೆ. ಅಲ್ಲದೇ ಚುನಾವಣಾ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದ ಕೊನೆ ಸುತ್ತಿನವರೆಗೂ ಶ್ರೀನಿವಾಸ್ ಪೂಜಾರಿ ಮುನ್ನಡೆ ಸಾಧಿಸಿ ಗೆಲುವು ಕಂಡಿದ್ದಾರೆ ಎಂದರು.
ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆ ಧಿಕ್ಕರಿಸಿ ಭದ್ರ ಬುನಾದಿ ಸೃಷ್ಟಿಸುವ ಸರ್ಕಾರಕ್ಕೆ ಮತ ನೀಡಿದ್ದಾರೆ. ಅಲ್ಲದೇ ಈ ಚುನಾವಣೆಯಲ್ಲಿ ಜಿಲ್ಲಾಡಳಿತ ಅಶಾಂತಿಗೆ ಅಸ್ಪದ ನೀಡದಂತೆ ಸೂಕ್ತ ನಿರ್ದೇಶನ ನೀಡುವ ಮೂಲಕ ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಶ್ರೀನಿವಾಸ್ ಪೂಜಾರಿ ಅವರು ಚಿಕ್ಕಮಗಳೂರು ಕ್ಷೇತ್ರದಲ್ಲಿ 23,746, ಮೂಡಿಗೆರೆ 20,025, ಶೃಂಗೇರಿ 25,238 ಹಾಗೂ ತರೀಕೆರೆ ಕ್ಷೇತ್ರದಲ್ಲಿ 20,680 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಹೆಚ್ಚು ಮತಗಳ ಲಭಿಸಿವೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಬಿ.ಜೆ. ಸೋಮಶೇಖರ್, ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ಕೋಟೆ ರಂಗನಾಥ್, ನಾರಾಯಣಗೌಡ, ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್, ಸಚಿನ್ ಸಂತೋಷ್ ಕೋಟ್ಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net