ಎಪಿಎಂಸಿ ಗದ್ದುಗೆ ಹಿಡಿದ ಜೆಡಿಎಸ್

SRP_22-01
Published on

ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ

ಬಿಜೆಪಿ ನಾಮನಿರ್ದೇಶಕರ ಬೆಂಬಲದೊಂದಿಗೆ ಜೆಡಿಎಸ್ ಕೃಷಿ ಉತ್ಪನ್ನ ಮಾರುಕಟ್ಟೆ ಗದ್ದುಗೆ ಏರಿದರೆ, ಸದಸ್ಯರ ಗೈರಿನಿಂದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿತು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ನ ಸಚ್ಚಿನ ಚಂದ್ರಶೇಖರ್ ಅಧ್ಯಕ್ಷರಾಗಿ, ಎ.ನಾಗರಾಜು ಉಪಾಧ್ಯಕ್ಷರಾಗಿ 8-0 ಅಂತರದ ಮತಗಳಿಂದ ಜಯಭೇರಿ ಬಾರಿಸಿದರು. ಅವರ ಆಯ್ಕೆಯನ್ನು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಎಂ.ವಿ.ರೂಪಾ ಘೋಷಿಸಿದರು.

ಎಪಿಎಂಸಿಯಲ್ಲಿ ಜೆಡಿಎಸ್‌ನ ಐವರು, ಕಾಂಗ್ರೆಸ್‌ನ 7 ಜನ ಹಾಗೂ ಬಿಜೆಪಿಯ ಮೂವರು ನಾಮನಿರ್ದೇಶಕರು ಸೇರಿದಂತೆ ಒಟ್ಟು 15 ಸದಸ್ಯರಿದ್ದರು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಕೆ.ರಾಮೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮೀಳಾ ಕೆ, ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸಚ್ಚಿನ ಚಂದ್ರಶೇಖರ್, ಉಪಾಧ್ಯಕ್ಷ ಸ್ಥಾನಕ್ಕೆ ಎ.ನಾಗರಾಜು ನಾಮಪತ್ರ ಸಲ್ಲಿಸಿದ್ದರು.

ಜೆಡಿಎಸ್ ಪಕ್ಷದ ಶಂಕರೇಗೌಡ, ತಿಮ್ಮೇಗೌಡ, ರೇವಣ್ಣ ಹಾಗೂ ಬಿಜೆಪಿಯ ನಾಮನಿರ್ದೇಶಕರಾದ ಬಿ.ಸಿ ಸತೀಶ್‌ಕುಮಾರ್, ಕೆ.ಕೆಂಪೇಗೌಡ, ಸುಶೀಲಾ ಬೆಂಬಲದೊಂದಿಗೆ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್‌ನ ಆಕಾಂಕ್ಷಿತರು ಹಾಗೂ ಸದಸ್ಯರು ಚುನಾವಣಾ ಕೊಠಡಿಗೆ ಗೈರಾಗುವ ಮೂಲಕ ತೀವ್ರ ಮುಖಭಂಗ ಅನುಭವಿಸಿದರು.

ಇದೇ ವೇಳೆ ನೂತನ ಅಧ್ಯಕ್ಷ ಸಚ್ಚಿನ್ ಚಂದ್ರಶೇಖರ್ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಸ್ವಂತ ಕಟ್ಟಡ ಹಾಗೂ ರೈತರ ಅನುಕೂಲಕ್ಕಾಗಿ ತೆರೆದ ಮಾರುಕಟ್ಟೆ ತೆರೆಯುವುದೇ ನನ್ನ ಮೊದಲ ಗುರಿ ಎಂದು ತಿಳಿಸಿದರು.

ಬಳಿಕ ಶಾಸಕ ರವೀಂದ್ರ ಶ್ರೀಕಂಠಯ್ಯ ತಾಲೂಕು ಪಂಚಾಯಿತಿಯ ತಮ್ಮ ಕೊಠಡಿಯಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಚುನಾವಣಾ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ, ಬಿಜೆಪಿ ತಾಲೂಕು ಅಧ್ಯಕ್ಷ ಎ.ಟಿ.ಜಯಕುಮಾರ್, ಕಾರ್ಯದರ್ಶಿ ಇಂದ್ರಕುಮಾರ್, ಮುಖಂಡ ದೇವರಾಜು, ಪುರಸಭಾ ಸದಸ್ಯರಾದ ಎಸ್.ಪ್ರಕಾಶ್, ಕೃಷ್ಣಪ್ಪ, ನರಸಿಂಹೇಗೌಡ, ಶಿವಣ್ಣ, ಮಾಜಿ ಸದಸ್ಯ ಸಾಯಿಕುಮಾರ್, ವೆಂಕಟೇಶ್, ಚನ್ನಪ್ಪ ಸೇರಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net