

ಬಳ್ಳಾರಿ: ರಾಮಮಂದಿರ ಪೂರ್ಣಗೊಳ್ಳದೆ ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ. ಇದು ಬಿಜೆಪಿಗರಿಂದ ಆಗುತ್ತಿರುವ ಹಿಂದು ವಿರೋಧಿ ನೀತಿ. ಕೇವಲ ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ ರಾಮ ಜಪ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳ ಸ್ವಾಮೀಜಿಗಳಲ್ಲಿ ಇಬ್ಬರು ಸ್ವಾಮೀಜಿ ಹಿಂದು ಧರ್ಮದ ಪ್ರಕಾರ ದೇವಸ್ಥಾನದ ಕಟ್ಟಡದ ಕಾರ್ಯ ಪೂರ್ಣಗೊಳ್ಳದೆ ಉದ್ಘಾಟಿಸಬಾರದು ಎಂದು ಹೇಳಿದ್ದಾರೆ. ಆದರೆ ಬಿಜೆಪಿಗರು ಹಿಂದುತ್ವ, ರಾಮನ ಆದರ್ಶದ ವಿರುದ್ಧ ಹೋಗುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಾತಿ, ಧರ್ಮದ ಹೆಸರಿನಲ್ಲಿ ವೈಭವೀಕರಣ ಮಾಡುವುದು ಸರಿಯಲ್ಲ. ಶ್ರೀರಾಮನ ನೈಜ ಅನುಯಾಯಿಗಳಿದ್ದರೆ ಅದು ಕಾಂಗ್ರೆಸ್ಸಿಗರು ಮಾತ್ರ. ಬಿಜೆಪಿಗರಿಗೆ ರಾವಣನ ಪ್ರವೃತ್ತಿ ಇದೆ. ಅಧಿಕಾರ ಮೋಹದಿಂದಕ್ಕಾಗಿ ರಾಮಮಂದಿರ ಉದ್ಘಾಟಿಸುತ್ತಿದ್ದಾರೆ. ಶ್ರೀರಾಮನಂತೆ ವಚನ ಪಾಲನೆಯನ್ನು ಕಾಂಗ್ರೆಸ್ ಮಾಡುತ್ತಿದೆ. ರಾಜ್ಯದಲ್ಲಿ ಐದು ಗ್ಯಾರಂಟಿ ಸ್ಕೀಂಗಳನ್ನು ನೀಡಿದ್ದೇವೆ. ಜನಪರ ಆಡಳಿತ ನೀಡುತ್ತಿದ್ದೇವೆ. ಬಿಜೆಪಿಗರು ವಚನ ಭ್ರಷ್ಟರು. ಪ್ರತಿ ವರ್ಷ ಎರಡು ಕೋಟಿ ಜನರಿಗೆ ಉದ್ಯೋಗ ನೀಡುತ್ತೇವೆ. ಬೆಲೆ ಏರಿಕೆಯನ್ನು ನಿಯಂತ್ರಿಸುತ್ತೇವೆ. ಕಪ್ಪುಹಣ ತರುತ್ತೇವೆ ಎಂದು ದೇಶದ ಜನರಿಗೆ ನೀಡಿದ ಆಶ್ವಾಸನೆಗಳು ಯಾವುದು ಈಡೇರಿಲ್ಲ ಎಂದರು.
ರಾಮನ ಹೆಸರನ್ನು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ ಬಾವೂ ಬಳಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಬರ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಬರ ಅಧ್ಯಯನ ತಂಡ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದೆ. ಆದರೂ ಪರಿಹಾರದ ಹಣ ಬಿಡುಗಡೆ ಮಾಡುತ್ತಿಲ್ಲ. ಆದರೆ ಬಿಜೆಪಿಗರು ಕಾಂಗ್ರೆಸ್ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದರು. ಮುಖಂಡರಾದ ಕಲ್ಲುಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ ಇತರರಿದ್ದರು.