ರಸ್ತೆ ದುರಸ್ತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಹಾಸ್ಯಾಸ್ಪದ

taatu monnappa
Published on

ಮಡಿಕೇರಿ: ಇತ್ತೀಚೆಗೆ ಬಿಜೆಪಿ ವತಿಯಿಂದ ಜಿಲ್ಲೆಯ ವಿವಿಧೆಡೆ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಟೀಕಿಸಿದರು.

ಜಿಲ್ಲೆಯ ಎರೆಡು ಶಾಸಕರು ಅಭಿವೃದ್ಧಿಗೆ ಪಣತೊಟ್ಟಿದ್ದು ಸಾಕಷ್ಟು ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸಾಗಿದೆ. ಮೇ ತಿಂಗಳಿನಿಂದ ಮಳೆ ಆರಂಭವಾದ್ದರಿಂದ ಕೆಲವು ರಸ್ತೆಗಳ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಲೋಕೋಪಯೋಗಿ ಇಲಾಖೆ ವತಿಯಿಂದ ೧೮೬ ಕೋಟಿ ರೂ ವೆಚ್ಚದಲ್ಲಿ ರಾಜ್ಯ ಹೆದ್ದಾರಿ, ಜಿಲ್ಲೆಯ ಮುಖ್ಯ ರಸ್ತೆಗಳು ಅಭಿವೃದ್ಧಿ ಕಾಣಲಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ನಡೆದಿದೆ. ಆದಷ್ಟು ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ. ಆದರೆ, ಇತ್ತೀಚೆಗೆ ಬಿಜೆಪಿ ಮಾಜಿ ಶಾಸಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

ವಕ್ತಾರ ತನ್ನಿರಾ ಮೈನಾ ಮಾತನಾಡಿ, ಪಂಚಾಯತ್ ರಾಜ್ ಯೋಜನೆಯಡಿ, ೧೧೬ ಕೋಟಿ ವೆಚ್ಚದಲ್ಲಿ ೧೫೨೨ ಕಾಮಗಾರಿ ನಡೆಸಲು ಕ್ರಿಯಾಯೋಜನೆ ಸಿದ್ದಗೊಂಡಿದೆ. ಕೆಆರ್‌ಐಡಿಎಲ್ ಸಂಸ್ಥೆ ಮೂಲಕ ೮೩ ಕೋಟಿ ವೆಚ್ಚದಲ್ಲಿ ೪೦೮ ಕಾಮಗಾರಿಗಳು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಅಲ್ಲದೇ, ಶಾಸಕರ ನಿಧಿಯಿಂದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಶಾಸಕರ ಅಭಿವೃದ್ಧಿ ಕೆಲಸಗಳಿಂದ ಬಿಜೆಪಿ ಹತಾಶರಾಗಿ ಪ್ರತಿಭಟನೆ ಮುಂದಾಗಿದೆ ಎಂದರು.

ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಹೊಸೂರು ಸೂರಜ್ ಮಾತನಾಡಿ, ಶಾಸಕರ ಅಭಿವೃದ್ಧಿ ಸಹಿಸಲು ಬಿಜೆಪಿಗರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಪ್ರತಿಭಟನೆ ಮಾಡುತ್ತಿದ್ದಾರೆ. ಅಭಿವೃದ್ಧಿಯಿಂದ ಭಯದ ವಾತಾವರಣ ಮೂಡಿದೆ. ಜನ ಸಾಮಾನ್ಯರ ಬೆಂಬಲ ಕೂಡ ಇಲ್ಲ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಡಿಸಿಸಿ ಸದಸ್ಯರಾದ ಟಿ.ಎಲ್.ಸುರೇಶ್, ಖಲೀಲ್ ಭಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net