ಸರ್ಕಾರದ ವಿರುದ್ಧ ಬಿಜೆಪಿ ಅಪಪ್ರಚಾರ

11sirsi1
Published on

ಶಿರಸಿ: ಅವಕಾಶ ಸಿಕ್ಕಾಗ ಅಭಿವೃದ್ಧಿ ಮಾಡದ ಬಿಜೆಪಿ ಈಗ ಅಭಿವೃದ್ಧಿ ಆಗುತ್ತಿರುವುದನ್ನು ಸಹಿಸಲಾಗದೇ ಸರ್ಕಾರದ ವಿರುದ್ಧ ಅಪಪ್ರಚಾರ ಕಾರ್ಯದಲ್ಲಿ ನಿರತವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಆರೋಪಿಸಿದು.

ವಾರ್ತಾ ಮತ್ತು ಪ್ರಚಾರ ಇಲಾಖೆ ನಗರದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ಫಲಕಗಳ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ವಿರುದ್ಧ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ಅರ್ಥಹೀನ ಕಾರ್ಯ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸರ್ಕಾರದಿಂದ ತಮ್ಮ ಪಂಚಾಯಿತಿಗೆ ಬಂದಿರುವ ಅನುದಾನದ ಪಟ್ಟಿಯನ್ನೂ ಬಹಿರಂಗವಾಗಿ ಫಲಕ ಅಳವಡಿಸಿದ್ದು, ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರಿಗೆ ಇರಿಸು ಮುರಿಸು ಉಂಟಾಗಿದೆ. ವಿರೋಧ ಪಕ್ಷವಾಗಿ ನಮಗೆ ಸಲಹೆ ಸೂಚನೆ ನೀಡಿ. ಕಾಮಗಾರಿ ಸರಿಯಾಗದಿದ್ದರೆ ನಮಗೆ ತಿಳಿಸಬೇಕು. ಅದನ್ನು ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಅಪಪ್ರಚಾರ ಮಾಡುವುದನ್ನು ಕೈ ಬಿಡಬೇಕು. ಪ್ರತಿ ಹಳ್ಳಿಗೆ ನಾವು ಉತ್ತಮ ರಸ್ತೆ ನಿರ್ವಿುಸುತ್ತಿದ್ದೇವೆ. ಸೇತುವೆ, ಕಾಲು ಸಂಕಗಳನ್ನು ಜನತೆ ಕೇಳಿದ ಕಡೆಯಲ್ಲೆಲ್ಲ ಕೊಟ್ಟಿದ್ದೇವೆ. ಪಂಚ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಮೂಲಕ ಪ್ರತಿ ಕುಟುಂಬಕ್ಕೂ ನೆರವಾಗುತ್ತಿದ್ದೇವೆ. ಇದ್ಯಾವುದೂ ಬಿಜೆಪಿಯವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಕ್ಷೇತ್ರಕ್ಕೆ ಕಳೆದ ಎರಡು ವರ್ಷಗಳಲ್ಲಿ 300 ಕೋಟಿ ರೂ. ಗೂ ಅಧಿಕ ಹಣ ಬಂದಿದೆ. ಇದೆಲ್ಲ ಯಾರು ಕೊಟ್ಟರು? ಈಗ ನಮ್ಮ ಕ್ಷೇತ್ರಕ್ಕೆ ಮತ್ತೆ 50 ಕೋಟಿ ರೂ. ಮಂಜೂರಾಗಿದ್ದು, ಕ್ರಿಯಾ ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು ಬಿಜೆಪಿ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.

ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸುಮಾ ಉಗ್ರಾಣಕರ್, ಜ್ಯೋತಿ ಪಾಟೀಲ, ರಘು ಕಾನಡೆ, ಶೈಲೇಶ ಗಾಂಧಿ, ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ, ತಹಸೀಲ್ದಾರ್ ರಮೇಶ ಹೆಗಡೆ ಇತರರಿದ್ದರು.

ಕಾರ್ಯಕರ್ತರ ಅಸಮಾಧಾನ

ಸರ್ಕಾರದ ಯೋಜನೆಗಳ ಮಾಹಿತಿ ಫಲಕಗಳಲ್ಲಿ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರ ಭಾವಚಿತ್ರ ಬಳಸದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ವಾರ್ತಾ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ರಘು ಕಾನಡೆ ಇತರರು, ಸರ್ಕಾರದ ಯೋಜನೆಗಳನ್ನು ಸ್ಥಳೀಯ ಶಾಸಕರು ಸಮರ್ಪಕವಾಗಿ ಕ್ಷೇತ್ರದಲ್ಲಿ ಜಾರಿಗೊಳಿಸಿದ್ದಾರೆ. ಇಲ್ಲಿಯ ಪ್ರತಿ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಯಾವೊಂದು ಫಲಕದಲ್ಲಿ ಅವರ ಭಾವಚಿತ್ರ ಇಲ್ಲ. ಇಂತಹ ತಪ್ಪನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಶಾಸಕ ಭೀಮಣ್ಣ ನಾಯ್ಕ ಅವರೇ ಸಮಾಧಾನಪಡಿಸಿ ವಾತಾವರಣ ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net