ಬಿಜೆಪಿಯಿಂದ 'ನಮ್ಮ ಭೂಮಿ ನಮ್ಮ ಹಕ್ಕು' ಹೋರಾಟ

21
Published on

ಮೈಸೂರು: ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಜಮೀನನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ಶುಕ್ರವಾರ ಧರಣಿ ನಡೆಸಿದ ಕಾರ್ಯಕರ್ತರು, ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಲ್ಪ ಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹತ್ತು ಹಲವು ರೀತಿಯಲ್ಲಿ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿದೆ. ಇದರ ಹೊಸ ರೂಪ ವಕ್ಫ್ ಬೋರ್ಡ್‌ಗೆ ರೈತರ ಜಮೀನು ಮಾಡಿಕೊಡುವ ಹುನ್ನಾರ ನಡೆಸಿದೆ ಎಂದು ದೂರಿದರು.

ರಾಜ್ಯದ ಜನರು ಈಗ ವಕ್ಫ್ ಬೋರ್ಡ್ ಎಂದು ಹೆಸರನ್ನು ಕೇಳಿದಾಗ ಹೆದರಿ ಹೋಗುವ ರೀತಿಯಲ್ಲಿ ಮಾಡಿದ್ದಾರೆ. ಕೆ.ಆರ್.ಕ್ಷೇತ್ರದ ವ್ಯಾಪ್ತಿಯ ಸ.ನಂ.153ರಲ್ಲಿ ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ವಕ್ಫ್ ಬೋರ್ಡ್ ಸುಮಾರು 12 ಎಕರೆ ಭೂಮಿ ವಾಪಸ್ ಕೊಡುವಂತೆ ಕೇಳುತ್ತಿದೆ. ಇಲ್ಲಿ ಸುಮಾರು 173 ಮನೆಗಳಿವೆ. 800 ಜನ ವಾಸ ಮಾಡುತ್ತಿದ್ದಾರೆ ಎಂದರು.

ಹತ್ತಾರು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಲು ವಕ್ಫ್ ಬೋರ್ಡ್ ಕೈ ಹಾಕಿದೆ. ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವೆ ಎಂದು ಹೇಳಿದರು.

ರೈತರ ಜಮೀನನ್ನು, ಮಠ-ಮಾನ್ಯ ಧಾರ್ಮಿಕ ನಂಬಿಕೆಗಳನ್ನು ಹಾಳು ಮಾಡುವ ಬೆದರಿಕೆ ಒಡ್ಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿದ್ದೇವೆ ಎಂದರು.

ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ, ಎರಡು ಪ್ರಧಾನಿ ಇರುವುದಿಲ್ಲ. ಹಾಗೆಯೇ ಯಾವುದೇ ವಿಚಾರಕ್ಕೆ ಎರಡು ಕಾನೂನು ಇಲ್ಲ. ವಕ್ಫ್ ಟ್ರಿಬ್ಯೂನಲ್‌ಗೆ ಎಷ್ಟು ಜಾಗ ಇತ್ತು ಅದನ್ನು ಬಿಟ್ಟು ಉಳಿದ ಜಾಗಗಳನ್ನು ಪಡೆಯುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಸರ್ಕಾರಿ ಶಾಲೆಗಳು, ಜಮೀನುಗಳನ್ನು ವಕ್ಫ್ ಆಸ್ತಿಯಾಗಿ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ಮೂಲ ಕಾರಣ ಜಮೀರ್ ಅಹಮ್ಮದ್ ಖಾನ್ ಹಾಗೂ ಅವರ ಬೆನ್ನಿಗೆ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ದೂರಿದರು.

ಯಾವುದೇ ಕಾರಣಕ್ಕೂ ನಮ್ಮ ಒಂದಿಂಚು ಜಾಗವನ್ನೂ ವಕ್ಫ್‌ಗೆ ಬಿಟ್ಟುಕೊಡಲು ನಾವು ಬಿಡುವುದಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ಇದ್ದೇ ಇರುತ್ತದೆ. ಈ ಸರ್ಕಾರ ಯಾವಾಗ ಬೀಳುತ್ತೆ ಎಂದು ಹೇಳಲು ಸಾಧ್ಯವಿಲ್ಲ. ನಾಳಿನ ಚುನಾವಣೆ ಫಲಿತಾಂಶದ ಬಳಿಕ ಮಹತ್ತರ ಬದಲಾವಣೆ ಆಗುತ್ತದೆ. ಅವರದೇ ಸರ್ಕಾರದ ವಿರುದ್ಧ ಸಚಿವರು ಮುಗಿ ಬೀಳುತ್ತಾರೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ, ಬಿಜೆಪಿ ವಕ್ತಾರ ಎಂ.ಜಿ.ಮಹೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಬಿ.ಪಿ.ಮಂಜುನಾಥ್, ಮಾಜಿ ಶಾಸಕ ಬಸವರಾಜು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮಾಜಿ ಮೇಯರ್‌ಗಳಾದ ಸಂದೇಶ್ ಸ್ವಾಮಿ, ಶಿವಕುಮಾರ್, ಮುಖಂಡರಾದ ಮಂಗಳಾ ಸೋಮಶೇಖರ್, ಪ್ರದೀಪ್‌ಕುಮಾರ್, ಕೇಬಲ್ ಮಹೇಶ್, ಹೇಮಂತ್ ಕುಮಾರ್‌ಗೌಡ, ವಿ.ಶೈಲೇಂದ್ರಬಾಬು, ಎಂ.ಡಿ.ಪಾರ್ಥಸಾರಥಿ, ಹೇಮಾ ನಂದೀಶ್, ಡಾ.ಅನಿಲ್ ಥಾಮಸ್, ರಾಕೇಶ್‌ಗೌಡ, ನಗರಪಾಲಿಕೆ ಮಾಜಿ ಸದಸ್ಯ ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net