

ಶಿವಮೊಗ್ಗ: ಇನ್ಮುಂದೆ ಬಿಜೆಪಿಯ ಎಲ್ಲ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್‌ಗಳು ಫ್ಲಾಪ್ ಆಗಲಿವೆ. ಹಾಗಾಗಿ ಅವರು ಏನೇ ಷಡ್ಯಂತ್ರ ರೂಪಿಸಿದರೂ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ಕನಸು ನನಸಾಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬಿಜೆಪಿಯಿಂದ 50 ಕೋಟಿ ರೂ. ಆಫರ್ ಬಂದಿದ್ದು ಹಲವು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಲಾಗಿದೆ ಎಂಬ ಶಾಸಕ ರವಿಕುಮಾರ್ ಗಣಿಗ ಅವರ ಹೇಳಿಕೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿ, ಬಿಜೆಪಿಯ ಈ ತಂತ್ರಗಾರಿಕೆ ಹೊಸದೇನಲ್ಲ. ಆದರೆ ಅದು ಅಟ್ಟರ್ ಫ್ಲಾಪ್ ಆಗಲಿದೆ. ಕಾಂಗ್ರೆಸ್‌ನ ಒಬ್ಬನೇ ಒಬ್ಬ ಶಾಸಕ ಪಕ್ಷ ಬಿಡುವುದಿಲ್ಲ ಮತ್ತು ಅವರ ಆಮಿಷಕ್ಕೆ ಒಳಗಾಗುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗುವ ಸಾಧ್ಯತೆ ಇದೆ ಎಂಬುದು ಅವರವರ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ. ನಾವು ಯಾರೂ ಹೈಕಮಾಂಡ್ ವಿರುದ್ಧ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.