ಬಹುಮತದ ಸರ್ಕಾರ ರಚನೆಯೇ ಬಿಜೆಪಿ ಸಂಕಲ್ಪ

mysore
Published on

ಮೈಸೂರು: ರಾಜ್ಯದಲ್ಲಿ ಮುಂದಿನ ಸಲ ಪೂರ್ಣ ಬಹುಮತದ ಸರ್ಕಾರ ರಚನೆಯೇ ಬಿಜೆಪಿ ಸಂಕಲ್ಪ. ಇದನ್ನು ಸಾಕಾರಗೊಳಿಸಲು ಪಕ್ಷದ ಕಾರ್ಯಕರ್ತರು ಪರಿಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಹೇಳಿದರು.


ಬೋಗಾದಿ ವೃತ್ತ ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು.


ಈ ಹಿಂದೆ ಬಿಜೆಪಿ ಸರ್ಕಾರ ರಚಿಸಿತ್ತು. ಆದರೆ, ಪೂರ್ಣ ಬಹುಮತ ಇರಲಿಲ್ಲ. ಈ ಕಾರಣಕ್ಕೆ ಅನ್ಯರ ಸಹಕಾರದಿಂದ ಸರ್ಕಾರ ಮಾಡಿದಾಗ ಅನೇಕ ಹಗ್ಗಜಗ್ಗಾಟಕ್ಕೆ ಕಾರಣವಾಯಿತು. ಬಹಳಷ್ಟು ಜನರು ಕಾಲೆಳೆದರು. ಜತೆಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಲಿಲ್ಲ. ಬೇರೆ ಪಕ್ಷದವರಿಗೆ ಅಧಿಕಾರ ದೊರೆಯಿತು. ಮುಂದಿನ ದಿನಗಳಲ್ಲಿ ಹೀಗೆ ಆಗಬಾರದು. ಅದಕ್ಕಾಗಿ ಬಹುಮತ ಬಿಜೆಪಿ ಸರ್ಕಾರದ ಗುರಿ ಹಾಕಿಕೊಳ್ಳಲಾಗಿದೆ ಎಂದರು.


ಈ ಗುರಿ ಸಾಧನೆಗಾಗಿ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಇದುವೇ ಬಿಜೆಪಿಯ ಕನಸು. ಇದನ್ನು ನನಸು ಮಾಡಲು ಪಕ್ಷದ ನಾಯಕರು, ಕಾರ್ಯಕರ್ತರು ಹೆಚ್ಚಿನ ಶ್ರಮ ಹಾಕಬೇಕು. ಮುಂದಿನ ದಿನಗಳಲ್ಲಿ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳು ಎದುರಾಗಲಿವೆ. ಅದಕ್ಕಾಗಿ ಎಲ್ಲರೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡಬೇಕು. ಇದರೊಂದಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಇದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಸಂಖ್ಯೆಯೊಂದಿಗೆ ಜಯಿಸಲು ಮೆಟ್ಟಿಲಾಗಬೇಕು ಎಂದರು.


ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಹಗರಣದ ಕುರಿತು ಪಕ್ಷ ಬಹಳ ಗಂಭೀರವಾಗಿದ್ದು, ಈ ಕುರಿತು ದೆಹಲಿಯ ವರಿಷ್ಠರು ನಮಗೆಲ್ಲ ದೂರವಾಣಿ ಕರೆ ಮಾಡಿ ನಿತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಸಗಿರುವ ಈ ಹಗರಣದ ವಿಷಯವನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು. ಬೀದಿ ಬೀದಿಯಲ್ಲಿ ಚರ್ಚೆ ಮಾಡಿ ಜನರಿಗೆ ವಿಷಯ ಮುಟ್ಟಿಸಬೇಕು ಎಂದರು.


ಆಗಸ್ಟ್ 15ಕ್ಕೆ ಬೂತ್ ಚಲೋ ಕಾರ್ಯಕ್ರಮ

ಪಕ್ಷ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ಆಗಸ್ಟ್ 15ರಿಂದ ಬೂತ್ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, 15 ದಿನಗಳ ಕಾಲ ನಡೆಯುವ ಇದರಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ಜನರೊಂದಿಗೆ ಸಮಾಲೋಚಿಸಬೇಕು ಎಂದರು.

ಮುಂಬರುವ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು. ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸಬೇಕು. ಜತೆಗೆ, ಈವರೆಗೂ ಎಚ್.ಡಿ.ಕೋಟೆ, ಕೆ.ಆರ್.ನಗರ, ಪಿರಿಯಾಪಟ್ಟಣ ತಾಪಂನಲ್ಲಿ ಪಕ್ಷ ಜಯಗಳಿಸಲು ಸಾಧ್ಯವಾಗಿಲ್ಲ. ಈ ಸಲ ಜೆಡಿಎಸ್ ಹೊಂದಾಣಿಕೆಯಿಂದ ಇದನ್ನೂ ಈ ಸಲ ಸಾಧಿಸಿಬೇಕಿದೆ ಎಂದು ನಂದೀಶ್ ರೆಡ್ಡಿ ಹೇಳಿದರು.


ಪ್ರತಿ ತಿಂಗಳ 4ನೇ ಭಾನುವಾರ ಪ್ರಸಾರವಾಗುವ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಮಾತ್’ ಕಾರ್ಯಕ್ರಮವನ್ನು ಕೇಳುವ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆ ಇದೆ. ಹೀಗಾಗಿ, ಮೈಸೂರು ಜಿಲ್ಲೆ 16ನೇ ಸ್ಥಾನದಲ್ಲಿ ಇದೆ. ಇದು ಒಂದನೇ ಸ್ಥಾನಕ್ಕೆ ಬರಬೇಕು. ಅದಕ್ಕಾಗಿ ಪಕ್ಷದ ಎಲ್ಲ ಕಾರ್ಯಕರ್ತರು ಈ ಕಾರ್ಯಕ್ರಮವನ್ನು ಆಲಿಸಬೇಕು. ಆ.25 ಮತ್ತು 26ರಂದು ಕಾರ್ಗಿಲ್ ವಿಜಯೋತ್ಸವ ಆಚರಣೆ ಮೂಲಕ ಹುತಾತ್ಮ ಯೋಧರನ್ನು ಸ್ಮರಣೆ ಮಾಡಲಾಗುವುದು. ಇದಕ್ಕೆ ಎಲ್ಲ ಮೋರ್ಚಾದವರು ಕೈಜೋಡಿಸಬೇಕು ಎಂದರು.


ಕೋಲಾರದ ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕರಾದ ಹರ್ಷವರ್ಧನ್, ಬಾಲರಾಜ್, ಮಾಜಿ ಎಂಎಲ್‌ಸಿ ಸಿದ್ದರಾಜು, ಮುಖಂಡರಾದ ಅನಿಲ್ ಥಾಮಸ್, ಹೇಮಂತ್‌ಕುಮಾರ್‌ಗೌಡ, ಆರ್.ರಘು, ಮೈ.ವಿ.ರವಿಶಂಕರ್, ನಂಜನಗೂಡಿನ ಮಹದೇವಯ್ಯ, ಮಂಗಳಾ ಸೋಮಶೇಖರ್ ಸೇರಿದಂತೆ ಇನ್ನಿತರರಿದ್ದರು.

ರೈತರಿಗೆ ಭರವಸೆ ಮೂಡಿಸಬೇಕಿದೆ


ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಎರಡು ತಾಲೂಕಿಗೆ ಒಂದು ಸಮಿತಿ ರಚನೆ ಮಾಡಿ ಪ್ರವಾಸ ಮಾಡಿ ಸ್ಥಳ ಪರಿಶೀಲನೆ ಮಾಡಬೇಕು. ಸಂಕಷ್ಟದಲ್ಲಿರುವ ಅಲ್ಲಿಯ ಜನರಿಗೆ, ರೈತರಿಗೆ ಪಕ್ಷದಿಂದ ಭರವಸೆ ಮೂಡಿಸಬೇಕಿದೆ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಸಲಹೆ ನೀಡಿದರು.


ಮೈಸೂರು ಬಿಜೆಪಿಗೆ ಬರಡು ಜಿಲ್ಲೆಯಲ್ಲ. ಹೀಗಾಗಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಉತ್ತಮ ಅವಕಾಶಗಳಿವೆ. ಅದಕ್ಕಾಗಿ ತಾಲೂಕು, ಜಿಲ್ಲಾ ವರದಿ ತಯಾರು ಮಾಡಿಲ್ಲ. ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಆಕಾಂಕ್ಷಿಗಳ ಪಟ್ಟಿ ಮಾಡಿಲ್ಲ. ತಕ್ಷಣವೇ ಈ ಕೆಲಸವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net