ಡಿ.1, ಕಡೂರು-ಬಾಳೆಹೊನ್ನೂರಲ್ಲಿ ಗ್ರಾಮ ಸ್ವರಾಜ್ ಸಮಾವೇಶ

H C Kalmarudappa
Published on

ಚಿಕ್ಕಮಗಳೂರು: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಡಿ.1ರಂದು ಜಿಲ್ಲೆಯ ಕಡೂರು ಹಾಗೂ ಬಾಳೆಹೊನ್ನೂರಲ್ಲಿ ಗ್ರಾಮ ಸ್ವರಾಜ್ ಸಮಾವೇಶ ಆಯೋಜಿಸಿದ್ದು, ಎರಡೂ ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡ ಪಾಲ್ಗೊಳ್ಳಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದರಾದ ಬಿ.ವೈ.ರಾಘವೇಂದ್ರ, ಜಿ.ಎಂ.ಸಿದ್ದೇಶ್, ನಾರಾಯಣಸ್ವಾಮಿ, ಜಿ.ಎಸ್.ಬಸವರಾಜು, ಶೋಭಾ ಕರಂದ್ಲಾಜೆ, ಮುಖಂಡರಾದ ಅರವಿಂದ ಲಿಂಬಾವಳಿ, ತುಳಸಿ ಮುನಿರಾಜುಗೌಡ, ವಿವೇಕಾನಂದ ಡಬ್ಬಿ ಹಾಗೂ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತಿತರ ಎಲ್ಲ ಪ್ರಮುಖರು ಭಾಗವಹಿಸಲಿರುವುದಾಗಿ ಹೇಳಿದರು.

ಅಂದು ಬೆಳಗ್ಗೆ 11 ಗಂಟೆಗೆ ಕಡೂರಿನ ಪುಟ್ಟಮ್ಮ ಶ್ರೀ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದ್ದು, ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬಾಳೆಹೊನ್ನೂರಿನ ಬಿಲ್ಲವ ಸಮುದಾಯ ಭವನದಲ್ಲಿ ನಡೆಯುವ ಸಮಾವೇಶದಲ್ಲಿ ಮೂಡಿಗೆರೆ ಹಾಗೂ ಆಲ್ದೂರು ಮಂಡಲ, ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಯಶಸ್ಸಿಗೆ ಸಕಲ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಪಂಚರತ್ನಗಳ ಆಯ್ಕೆ
ಜಿಲ್ಲೆಯ 209 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, ಆ ವ್ಯಾಪ್ತಿಯ ಪ್ರತಿ ಬೂತ್‍ನಲ್ಲಿ ಬಿಎಲ್‍ಎ-2, ಒಬಿಸಿ ಮಹಿಳೆ ಹಾಗೂ ಸಾಮಾನ್ಯ ವರ್ಗದ ಐವರು ಕಾರ್ಯಕರ್ತರನ್ನು ಒಳಗೊಂಡ ಪಂಚರತ್ನ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಗ್ರಾಪಂ ಚುನಾವಣೆ ಗೆಲ್ಲಲು ವಾರ್ ರೂಮ್‍ಗಳ ರಚನೆ, ಕಾಲ್ ಸೆಂಟರ್ ಗಳ ಕಾರ್ಯಾರಂಭ, ಪಂಚರತ್ನ ತಂಡ ರಚನೆ, ಪೇಜ್ ಪ್ರಮುಖರ ನಿಯುಕ್ತಿ ಹಾಗೂ ಕುಟುಂಬ ಮಿಲನ-ಹೀಗೆ ಪಂಚಸೂತ್ರಗಳನ್ನು ಅಳವಡಿಸಲಾಗುತ್ತಿದೆ. ಪಂಚರತ್ನ ತಂಡಗಳು ಚುನಾವಣೆಯಲ್ಲಿ ಆಯಾ ಬೂತ್‍ನ ಉಸ್ತುವಾರಿ ನಿರ್ವಹಿಸಲಿದ್ದು, ಅವುಗಳ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದರು.

ಬಿಜೆಪಿ ಪರ ವಾತಾವರಣ
ಜಿಲ್ಲೆಯಿಂದ ಬೂತ್‍ವರೆಗಿನ ಸಂಪರ್ಕಕ್ಕಾಗಿ ವಾರ್ ರೂಮ್‍ಗಳು ಪಾತ್ರ ವಹಿಸಲಿವೆ. ಪ್ರತಿ ಶಕ್ತಿ ಕೇಂದ್ರದಲ್ಲಿ ಕಾಲ್‍ಸೆಂಟರ್ ಗಳು ಕೆಲಸ ಮಾಡಲಿದ್ದು, ಮತದಾರ ಮತ್ತು ಕಾರ್ಯಕರ್ತರ ನಡುವಿನ ಸಂಪರ್ಕಕ್ಕೆ ಪೇಜ್ ಪ್ರಮುಖರು ಶ್ರಮಿಸಲಿದ್ದಾರೆ. ಆಯಾ ಶಕ್ತಿ ಕೇಂದ್ರದಲ್ಲಿ ನಡೆಯುವ ಕುಟುಂಬ ಮಿಲನ ಬಿಜೆಪಿ ಪರ ವಾತಾವರಣ ನಿರ್ಮಿಸಲಿದೆ. ಈ ಎಲ್ಲ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ. ಬೂತ್‍ಮಟ್ಟದಲ್ಲಿ ಪಕ್ಷ ಸಂಘಟಿಸಲು ಇದೊಂದು ಉತ್ತಮ ಅವಕಾಶವೆಂದು ತೀರ್ಮಾನಿಸಲಾಗಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಶೇ.80ಕ್ಕೂ ಹೆಚ್ಚು ಸ್ಥಾನಗಳನ್ನುವ ಗೆಲ್ಲುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಅತಿ ಹೆಚ್ಚು ಶಾಸಕರಿದ್ದು ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರವೇ ಇರುವುದರಿಂದ ಜನಪರ ಯೋಜನೆಗಳನ್ನು ಅದ್ವಿತೀಯವಾಗಿ ರೂಪಿಸಿ ಸಾಕಾರಗೊಳಿಸಿರುವುದು ಈ ಚುನಾವಣೆ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಗಿರೀಶ್ ನೇಮಕಕ್ಕೆ ಜಿಲ್ಲಾ ಬಿಜೆಪಿ ಅಚ್ಚರಿ
ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಗಿರೀಶ್ ಉಪ್ಪಾರ್ ನೇಮಕ ವಿರೋಧಿಸಿ ಕಡೂರು ತಾಲೂಕಿನ ಎಲ್ಲ ಮಂಡಲಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡಿರುವುದನ್ನು ಪಕ್ಷದ ರಾಜ್ಯ ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಗಿರೀಶ್ ಉಪ್ಪಾರ್ ನೇಮಕ ಜಿಲ್ಲಾ ಬಿಜೆಪಿಗೂ ಅಚ್ಚರಿ ಉಂಟು ಮಾಡಿದೆ. ಇತ್ತೀಚೆಗೆ ವಾಟ್ಸಪ್ ಸ್ಟೇಟಸ್‍ನಲ್ಲಿ 2023ರ ವೇಳೆಗೆ ಕಡೂರಿನ ಶಾಸಕರು ತಾವೇ ಎಂದು ಗಿರೀಶ್ ಉಪ್ಪಾರ್ ಪೋಸ್ಟ್ ಹಾಕಿದ್ದು, ಜಿಲ್ಲಾ ಬಿಜೆಪಿ ಇದನ್ನು ಸಹ ಗಂಭೀರವಾಗಿ ಪರಿಗಣಿಸಿದೆ. ಈ ಎಲ್ಲವುಗಳ ಬಗ್ಗೆ ರಾಜ್ಯ ವರಿಷ್ಠರ ಗಮನಕ್ಕೆ ತರಲಾಗಿದ್ದು, ಖುದ್ದಾಗಿ ವರಿಷ್ಠರನ್ನು ಭೇಟಿ ಮಾಡಿ ಸಹ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

ಜಿಪಂ ಅಧ್ಯಕ್ಷರಿಂದ ಪಕ್ಷದ ಬೆನ್ನಿಗೆ ಚೂರಿ
ಜಿಪಂ ಅಧ್ಯಕ್ಷರು ಪಕ್ಷದ ಚಿಹ್ನೆಯಲ್ಲಿ ಗೆದ್ದು ಬಂದಿದ್ದು, ಸದಸ್ಯರಿಂದಲೇ ಅಧ್ಯಕ್ಷರೂ ಆಗಿ ಈಗ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಅದಕ್ಕಾಗಿ ಪಕ್ಷ ಅವರನ್ನು ಅಮಾನತು ಮಾಡಿದೆ. ಜಿಪಂನಲ್ಲಿ ಅವರ ವಿರುದ್ಧ ಅವಿಶ್ವಾಸ ಮಂಡಿಸುವ ಇಚ್ಛೆ ಇದ್ದರೂ 22 ಸದಸ್ಯ ಬಲದ ಅವಶ್ಯಕತೆ ಇದೆ. ಅಧ್ಯಕ್ಷರ ಹೊರತಾಗಿ ಪಕ್ಷದ ಸದಸ್ಯರು 20 ಮಂದಿ ಮಾತ್ರ ಇದ್ದಾರೆ. ಸಂಖ್ಯಾ ಕೊರತೆ ಇರುವುದರಿಂದ ಪಕ್ಷದ ಮುಖಂಡರು ಈ ಬಗ್ಗೆ ಚಿಂತನೆ ನಡೆಸಲಿದ್ದಾರೆ. ಅದಕ್ಕಾಗಿ ಆಪರೇಶನ್ ಕಮಲದ ಅವಶ್ಯಕತೆ ಇಲ್ಲ. ಅದರ ಅವಶ್ಯಕತೆಯೂ ಪಕ್ಷಕ್ಕಿಲ್ಲ. ಆದರೆ ಬೇರೆ ಪಕ್ಷದ ಸದಸ್ಯರು ಸಹ ಅಧ್ಯಕ್ಷರನ್ನು ಕೆಳಗಿಳಿಸಬೇಕೆಂಬ ಬಗ್ಗೆ ಚರ್ಚಿಸುತ್ತಿರುವ ಮಾಹಿತಿ ಕೇಳಿ ಬಂದಿದೆ. ಅಧ್ಯಕ್ಷರು ಒಟ್ಟಾರೆ ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.

ಬಾಲಿಶ ಮನಸ್ಥಿತಿಯಿಂದ ನೋಟಿಸು
ತಮ್ಮ ವಿರುದ್ಧ ದಲಿತ ದೌರ್ಜನ್ಯದ ಆರೋಪ ಹೊರಿಸಿ ಜಿಪಂ ಅಧ್ಯಕ್ಷರು ಲೀಗಲ್ ನೋಟಿಸ್ ನೀಡಿರುವುದಕ್ಕೆ ಪ್ರತಿಕ್ರಿಯಿಸಿ, ದಲಿತ ದೌರ್ಜನ್ಯ, ನಿಂದನೆಯ ವರ್ತನೆ ತೋರಿಲ್ಲ. ಅಂಥ ಸಂಸ್ಕಾರವನ್ನು ಮನೆಯವರಾಗಲಿ, ಪರಿವಾರವಾಗಲಿ ಕಲಿಸಿಕೊಟ್ಟಿಲ್ಲ. ಈ ವಿಚಾರದಲ್ಲಿ ಅಧ್ಯಕ್ಷರು ಬಾಲಿಶ ಮನಸ್ಥಿತಿಯಿಂದ ನೋಟಿಸು ನೀಡಿದ್ದಾರೆ ಎಂದರು.

ಅಷ್ಟಕ್ಕೂ ಪಕ್ಷದಲ್ಲಿ ನಿರ್ದೇಶನ ಮಾಡುವ ಹಕ್ಕು, ಜವಾಬ್ದಾರಿ ಜಿಲ್ಲೆಯ ನಾಯಕರಿಗಿದೆ. ಜಿಪಂ ಅಧ್ಯಕ್ಷರ ವಿಚಾರದಲ್ಲೂ ಈ ನಾಯಕರ ತಂಡ ನಿರ್ಣಯಿಸಿದೆ. ಇದನ್ನು ಅಧ್ಯಕ್ಷನಾಗಿ ಅನುಷ್ಠಾನ ಮಾಡಿದ್ದಾಗಿ ತಿಳಿಸಿದ ಅವರು, ಇದನ್ನು ದಲಿತ ದೌರ್ಜನ್ಯ ಎನ್ನುವ ಅಧ್ಯಕ್ಷರ ಮನಸ್ಥಿತಿ ಬಾಲಿಶ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್, ಸಹ ವಕ್ತಾರರಾದ ಕವಿತ ಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ದೇವರಾಜ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಮಾಧ್ಯಮ ಪ್ರಮುಖ್ ಸುಧೀರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net