

ಮಡಿಕೇರಿ: ಭ್ರಷ್ಟಾಚಾರ ಕಿತ್ತೊಗೆದು ಸ್ವಾಭಿಮಾನಿ ಭಾರತ ನಿರ್ಮಾಣ ಭಾರತೀಯ ಜನತಾ ಪಕ್ಷದ ಗುರಿಯಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಬಿಜೆಪಿ ರಾಷ್ಟ್ರ ನಾಯಕರ ಆದೇಶದಂತೆ ಭಾರತೀಯ ಜನತಾ ಪಕ್ಷ ಮಡಿಕೇರಿ ನಗರ ಮಂಡಲ ವತಿಯಿಂದ ವಿದ್ಯಾನಗರದ ೧೯೯ನೇ ಬೂತ್‌ನಲ್ಲಿ ಆಯೋಜಿಸಲಾಗಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿಗೆ ಅಧಿಕಾರ ಮುಖ್ಯವಲ್ಲ. ಅಧಿಕಾರ ಹಿಡೀಯೋದಕ್ಕಾಗಿ ಪಕ್ಷ ಅಲ್ಲ. ದೇಶ ಕಟ್ಟಲು ಹೊರಟಿರುವವರಿಗೆ ಅಧಿಕಾರಬೇಕು. ಕಟ್ಟ ಕಡೆಯಲ್ಲಿರುವ, ಶಕ್ತಿಯಿಲ್ಲದವರಿಗೆ ಶಕ್ತಿ ತುಂಬುವುದು ಬಿಜೆಪಿಯ ಕೆಲಸವಾಗಿದೆ. ಈ ಒಂದು ಉದ್ದೇಶದಿಂದಲೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ, ಎಲ್ಲರಿಗೂ, ಎಲ್ಲರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವಂತಹ ಕಾರ್ಯ ಮಾಡಿದೆ. ಬಿಜೆಪಿ ಗೆದ್ದ ಕ್ಷೇತ್ರಗಳಿಗೆ ಮಾತ್ರ ಈ ಯೋಜನೆಗಳು ಸೀಮಿತವಾಗಿಲ್ಲ. ಪ್ರತಿಯೋರ್ವರಿಗೂ ಇದು ಅನ್ವಯವಾಗಲಿದೆ ಎಂದರು.
ಸ್ವಾಭಿಮಾನಿ, ಸ್ವಾವಲಂಬಿ ಭಾರತ ನಿರ್ಮಾಣವಾಗಬೇಕಾದರೆ ಪ್ರತಿಯೋರ್ವರಿಗೂ ಬಿಜೆಪಿ ಸರ್ಕಾರದ ಯೋಜನೆ ಬಗ್ಗೆ ತಿಳಿಯಪಡಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆತಿವೆಯೇ ಎಂದು ಪರಿಶೀಲಿಸಿ ತಲುಪಿಸುವ ಕಾರ್ಯವಾಗಬೇಕು. ಇದು ಬೂತ್‌ಮಟ್ಟದ ಕಾರ್ಯಕರ್ತರ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಬೂತ್ ವಿಜಯ ಅಭಿಯಾನ ಆರಂಭಿಸಲಾಗಿದ್ದು, ಪ್ರತಿ ಬೂತ್‌ನಲ್ಲೂ ಪಕ್ಷ ಗೆಲುವು ಸಾಧಿಸಬೇಕು. ರಾಷ್ಟ್ರೀಯ ನಿರ್ಮಾಣ ಕಾರ್ಯದಲ್ಲಿ ಸಂಘಟಿತ ಕಾರ್ಯಯೋಜನೆಯಾಗಬೇಕು. ಅಭಿವೃದ್ಧಿ ಆಧಾರದ ಮೇಲೆ ಗೆಲ್ಲುವುದು ಬಿಜೆಪಿಯ ಸಿದ್ಧಾಂತವಾಗಿದೆ ಎಂದು ಸಚಿವರು ಹೇಳಿದರು.
ವಿಧಾನಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಬಿಜೆಪಿ ದೇಶದ ಚಿಂತನೆಯೊಂದಿಗೆ ಹಿರಿಯರು ಕಟ್ಟಿ ಬೆಳೆಸಿದ, ಸಿದ್ಧಾಂತವಿರುವ ಪಕ್ಷವಾಗಿದೆ. ಒಂದೇ ಆಚಾರ, ವಿಚಾರ, ಒಂದೇ ಕಾನೂನು ದೇಶದಲ್ಲಿರಬೇಕೆಂಬುದು ಚಿಂತನೆಯಾಗಿದೆ. ಸರ್ವರಿಗೂ ಸವಲತ್ತುಗಳು ನೇರವಾಗಿ ಕೈ ಸೇರಬೇಕೆಂಬ ನಿಟ್ಟಿನಲ್ಲಿ ಹಲವಷ್ಟು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಜನತೆಗೆ ಉತ್ತಮ ಆಡಳಿತ ನೀಡಬೇಕೆಂಬುದು ಬಿಜೆಪಿ ಉದ್ದೇಶವಾಗಿದೆ. ಕಾರ್ಯಕರ್ತರು ಈ ಬಗ್ಗೆ ಮನೆ ಮನೆಗೆ ತಿಳಿಸಬೇಕು. ಮುಂದಿನ ಚುನಾವಣೆಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿಯೂ ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ರಾಷ್ಟ್ರೀಯ ನಾಯಕ ಅಮಿತ್ ಶಾ ಅವರ ಚಿಂತನೆಯಂತೆ ಪಕ್ಷವನ್ನು ಶಸಕ್ತಗೊಳಿಸುವ ಸಲುವಾಗಿ ೧೦ ದಿವಸಗಳ ಕಾಲ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷವನ್ನು ಗಟ್ಟಿಮಾಡುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರಾಜ್ಯದಾದ್ಯಂತ ಎಲ್ಲಾ ಮಂಡಲಗಳಲ್ಲಿ ಕಾರ್ಯಕ್ರಮ ಆರಂಭಗೊಂಡಿದೆ. ಜಿಲ್ಲೆಯ ಎಲ್ಲಾ ೫೪೩ ಬೂತ್‌ಗಳಲ್ಲಿಯೂ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭ ಮಡಿಕೇರಿ ಶಾಸಕರು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಬೂತ್ ಅಧ್ಯಕ್ಷ ಸಂದೀಪ್, ವಾರ್ಡ್ ಸದಸ್ಯೆ ಚಿತ್ರಾವತಿ, ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರ ಕಾರ್ಯದರ್ಶಿ ಕೆ.ಎಂ. ಅಪ್ಪಣ್ಣ, ಉಪಾಧ್ಯಕ್ಷ ಬಿ.ಕೆ.ಜಗದೀಶ್, ನಗರಸಭಾ ಸದಸ್ಯರುಗಳು, ಕಾರ್ಯಕರ್ತರು ಇದ್ದರು.