ವಿಧಾನಸಭೆಯಲ್ಲಿ ಬಿಜೆಪಿ ಹೋರಾಟ: ಚೆನ್ನಿ

Channabasappa bjp
Published on

ಶಿವಮೊಗ್ಗ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಂದೆಡೆ ಮುಸ್ಲಿಮರ ತುಷ್ಟಿಕರಣ, ಇನ್ನೊಂದೆಡೆ ಭ್ರಷ್ಟಾಚಾರ ಮಿತಿ ಮೀರಿದೆ. ಇವುಗಳ ವಿರುದ್ಧ ಮುಂಬರುವ ವಿಧಾನ ಮಂಡಲದ ಕಲಾಪದಲ್ಲಿ ಹೋರಾಟ ಮಾಡಲು ಬಿಜೆಪಿ ಸಂಕಲ್ಪ ಮಾಡಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಮುಸ್ಲಿಂ ಸಮುದಾಯಕ್ಕೆ ಈಗಾಗಲೇ ಬಹಳಷ್ಟು ಅನುದಾನ ನೀಡಲಾಗಿದೆ. ಹಲವು ಯೋಜನೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಇಷ್ಟಾದ ಮೇಲೂ ವಸತಿ ಯೋಜನೆಗಳಲ್ಲಿ ಶೇ. 15ಕ್ಕೆ ಮೀಸಲು ಏರಿಕೆ ಮಾಡಿರುವುದು ಘೋರ ಅಪರಾಧ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ವಸತಿ ಯೋಜನೆಗಳಲ್ಲಿ ಸರ್ಕಾರದ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಬಹಿರಂಗಪಡಿಸಿದ್ದಾರೆ. ಇಷ್ಟಾದರೂ ಸಿಎಂ ತುಟಿಬಿಚ್ಚಿಲ್ಲ. ಸಂಬಂಧಪಟ್ಟ ಇಲಾಖೆ ಸಚಿವರಿಂದ ಸ್ಪಷ್ಟನೆ ಪಡೆದಿಲ್ಲ ಎಂದು ದೂರಿದರು.

ಸ್ವತಃ ಕಾಂಗ್ರೆಸ್ ಶಾಸಕರೆ ಆರೋಪ ಮಾಡಿರುವುದರಿಂದ ವಸತಿ ಇಲಾಖೆಯ ಸಂಪೂರ್ಣ ತನಿಖೆಯಾಗಬೇಕು. ಸಚಿವ ಜಮೀರ್ ಅಹ್ಮದ್ ಅದೇ ಸ್ಥಾನದಲ್ಲಿ ಮುಂದುವರಿದರೆ ಪ್ರಾಮಾಣಿಕ ತನಿಖೆ ಸಾಧ್ಯವಿಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ಎನ್.ಜಿ.ನಾಗರಾಜ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೀನದಯಾಳು, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಸುರೇಖಾ ಮುರಳೀಧರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net