ಬಿಹಾರ ಫಲಿತಾಂಶದಿಂದಲೇ ಬಿಜೆಪಿ ಅವನತಿ

Published on

ಬಳ್ಳಾರಿ : ದೇಶದಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅಪಾರ ಬೆಂಬಲ ಸಿಕ್ಕಿದ್ದು, ಸಂವಿಧಾನ ವಿರೋಧಿ ಬಿಜೆಪಿಯ ಅವನತಿ ಬಿಹಾರದಿಂದಲೇ ಪ್ರಾರಂಭವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನ.14 ರಂದು ಮಾಜಿ ಪ್ರಧಾನಿ ಜವಹರ ಲಾಲ್ ನೆಹರೂ ದಿನಾಚರಣೆ ದಿನದಂದೇ ಬಿಹಾರ ಚುನಾವಣೆಯ ಫಲಿತಾಂಶ ಹಿನ್ನೆಲೆ ಸಿಹಿ ಸುದ್ದಿ ಬರಲಿದೆ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿರುವ ಹಿನ್ನೆಲೆ ಮುಂಬರುವ ಬಿಬಿಎಂಪಿ ಹಾಗೂ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು. ಬಿಗ್‌ಬಾಸ್ ವಿಷಯದ ಬಗ್ಗೆ ನನಗೆ ಸಂಬಂಧವಿಲ್ಲ. ಜಾಲಿವುಡ್ ಸ್ಟುಡಿಯೋ ಜಲ ಹಾಗೂ ವಾಯು ಕಾಯ್ದೆ ನಿಯಮ ಉಲ್ಲಂಘನೆ ಮಾಡಿರುವುದರ ದೂರು ಬಂದ ಹಿನ್ನೆಲೆ ಕ್ರಮವಹಿಸಲಾಗಿದೆ. ಜಿಂದಾಲ್‌ನಿಂದ ದರೋಜಿ ಕೆರೆ ನೀರು ಹರಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಯಾರೇ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿರಲಿ ಕ್ರಮವಹಿಸುವೆ. ಜೀನ್ಸ್ ಉದ್ಯಮಿಗಳಿಗೆ ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಕೆಐಒಸಿಎಲ್ ಕಂಪನಿಗೆ ಬಿಜೆಪಿ ಸರ್ಕಾರ ಗಣಿಗಾರಿಕೆ ಅನುಮತಿ ನೀಡಿತ್ತು. ಕಾಂಗ್ರೆಸ್ ಸರ್ಕಾರ ತಡೆಹಿಡಿದಿತ್ತು. ಆದರೆ, ನ್ಯಾಯಾಲಯದ ಮೊರೆ ಹೋಗಿ ಕಂಪನಿ ಅನುಮತಿ ಪಡೆದಿದೆ. ಪರಿಸರಕ್ಕೆ ದಕ್ಕೆಯಾಗದಂತೆ ಗಣಿಗಾರಿಕೆ ನಡೆಸಲು ಸೂಚಿಸಲಾಗಿದೆ. ನಿಯಮ ಉಲ್ಲಂಘನೆಯಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪರಮಾಧಿಕಾರಿ ಹೊಂದಿದ್ದಾರೆ. ಸಿಎಂ ಅವರು ಸಚಿವರೊಂದಿಗೆ ಕರೆದಿರುವ ಔತಣಕೂಟವು ಹೊಸದು ಏನಿಲ್ಲ. ಸಚಿವರಿಗೆ ಅಭಿವೃದ್ಧಿ ಬಗ್ಗೆ ಮಾರ್ಗದರ್ಶನ ಮಾಡಲು ಕರೆದಿದ್ದು ನಾನು ಹೋಗುವೆ ಎಂದರು. ರಾಜ್ಯ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಹಾಗೂ ವರಿಷ್ಠರು ತಿರ್ಮಾನ ಮಾಡುತ್ತಾರೆ ಎಂದರು.

ಬಿಜೆಪಿ ನಾಯಕರು ಸುಳ್ಳು ಹೇಳುವದರಲ್ಲಿ ನಿಸ್ಸೀಮರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಅಪರಾಧ ಹಾಗೂ ಅಕ್ರಮ ಬಗ್ಗೆ ಅವರಿಗೆ ಕನಸು ಬೀಳುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದಷ್ಟು ಅಭಿವೃದ್ಧಿ ಕಾರ್ಯಗಳು, ಬಿಜೆಪಿ ಯಾವುದಾದರೂ ಮಾಡಿದ್ದರೆ ಸಾಕ್ಷಿ ತೋರಿಸಲಿ ಎಂದು ಸವಾಲು ಹಾಕಿದರು. ಬಿಜೆಪಿಯು ರಾಜ್ಯದ ಅಭಿವೃದ್ಧಿ ನೋಡಿ ಹತಾಶೆ ಮನೋಭಾವದಿಂದ ಸುಖಾಸುಮ್ಮನೆ ಆರೋಪಿಸಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net