ಸನಾತನ ದೇಗುಲಗಳಿಗೆ ಗತವೈಭವ ; ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಬಣ್ಣನೆ

13CBP2
Published on

ಚಿಕ್ಕಬಳ್ಳಾಪುರ: ಭಾರತೀಯ ಸನಾತನ ಸಂಸ್ಕೃತಿಯ ಸಂಕೇತವಾಗಿರುವ ಪುರಾಣ ಪ್ರಸಿದ್ಧ ಹಲವು ದೇಗುಲಗಳಿಗೆ ಗತ ವೈಭವದ ಸ್ಪರ್ಶ ಸಿಗುತ್ತಿರುವುದು ಖುಷಿಯ ವಿಚಾರ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಸಂತಸ ವ್ಯಕ್ತಪಡಿಸಿದರು.

ನಗರದ ಮರಳು ಸಿದ್ದೇಶ್ವರ ಸಮುದಾಯದ ಭವನದಲ್ಲಿ ಬಿಜೆಪಿ ಕೈಗೊಂಡಿದ್ದ ಭವ್ಯಕಾಶಿ, ದಿವ್ಯಕಾಶಿ ಲೋಕಾರ್ಪಣೆಯ ಆನ್‌ಲೈನ್ ಲೈವ್ ವೀಕ್ಷಣೆ ವೇಳೆ ಮಾತನಾಡಿದರು. ಕಾಶಿ ವಿಶ್ವನಾಥನ ದೇಗುಲ ಮತಾಂಧ ಅರಸರ ದಾಳಿಗೆ ತುತ್ತಾಗಿದ್ದು ಕಾಲ ಕಳೆದಂತೆ ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಅಕ್ರಮ ಒತ್ತುವರಿ, ಮೂಲ ಸೌಕರ್ಯಗಳ ಕೊರತೆ, ಇಕ್ಕಟ್ಟಿನ ಜಾಗದಲ್ಲಿ ಭಕ್ತರು ಕಿರಿಕಿರಿ ಅನುಭವಿಸುವುದು ಸೇರಿ ನಾನಾ ಸಮಸ್ಯೆಗಳು ಕಾಡುತ್ತಿದ್ದರೂ ಯಾವುದೇ ಸರ್ಕಾರಗಳು ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಆದರೆ, ಪ್ರಧಾನಿ ನರೇಂದ್ರಮೋದಿ ಕೋಟ್ಯಂತರ ರೂ.ವೆಚ್ಚದಲ್ಲಿ ವಿಶೇಷ ಕಾರಿಡಾರ್, ಪ್ರದರ್ಶನಾಲಯ, ಗ್ರಂಥಾಲಯ ಸೇರಿ ಆಕರ್ಷಕ ಕೇಂದ್ರಗಳ ನಿರ್ಮಾಣದ ಮೂಲಕ ಹೊಸ ರೂಪ ನೀಡಿದ್ದಾರೆ ಎಂದರು.

ಹಿಂದುಗಳ ಆಧ್ಯಾತ್ಮಿಕ ಮತ್ತು ಭಾವಾನಾತ್ಮಕ ಕೇಂದ್ರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಹಲವು ದಶಕಗಳಿಂದ ಗೊಂದಲಗೂಡಾಗಿ ಉಳಿದಿದ್ದ ಭೂ ವಿವಾದ ಇತ್ಯರ್ಥ ವಿಳಂಬಕ್ಕೆ ರಾಜಕೀಯ ಪಕ್ಷಗಳ ಮತ ಬ್ಯಾಂಕಿನ ಸ್ವಾರ್ಥವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಗುಲಗಳು ಸಕಾರಾತ್ಮಕ ಭಾವನೆ, ಸೂಕ್ತ ಮಾರ್ಗದರ್ಶಿ ಕೇಂದ್ರಗಳಾಗಿವೆ. ಪ್ರತಿಯೊಬ್ಬರು ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಂಚಾಲಕಿ ಲಲಿತಾ ಮಾತಾಜಿ ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್‌ರೆಡ್ಡಿ, ಮರಳುಕುಂಟೆ ಕೃಷ್ಣಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಭಿಷೇಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net