

ಮಂಗಳೂರು: ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಸೆ.1ರಂದು ಧರ್ಮಸ್ಥಳ ಚಲೋ ಹಮ್ಮಿಕೊಂಡಿದೆ. ಧರ್ಮಸ್ಥಳ ಕ್ಷೇತ್ರವನ್ನು ರಕ್ಷಣೆ ಮಾಡಲು ನಮ್ಮ ಸರ್ಕಾರ ಇದೆ ಎಂದು ರಾಜ್ಯ ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವ ಹೋರಾಟದಲ್ಲಿ ರಾಜ್ಯದ ಹಿತವೂ ಇಲ್ಲ, ಜನತೆಯ ಹಿತವೂ ಇಲ್ಲ. ಅದಕ್ಕಿಂತ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ರಾಜ್ಯಕ್ಕೆ ಬರಬೇಕಾದ ಹಣ ಕೊಡಿಸಲು ಪ್ರಯತ್ನ ಮಾಡಲಿ, ರಾಜ್ಯದ ಜನತೆಯ ಪರವಾಗಿ ಹೋರಾಟ ಮಾಡಲಿ ಎಂದರು.
ಬಿಜೆಪಿ ಉದ್ದೇಶ ಏನು ಅಂತ ಎಲ್ಲರಿಗೂ ಗೊತ್ತಿದೆ. ಕೇವಲ ಧರ್ಮ, ಇಂಥ ವಿಚಾರಗಳನ್ನೇ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಸಮಾವೇಶ ಮಾಡುವುದಾದರೆ ಮಾಡಲಿ. ಆದರೆ ಎಸ್ಐಟಿ ತಂಡ ಅದರ ಪಾಡಿಗೆ ತನಿಖೆ ಮಾಡಿಯೇ ಮಾಡುತ್ತದೆ, ನಿಜಾಂಶವನ್ನು ಹೊರ ತರಲಿದೆ. ಎಸ್ಐಟಿ ತನಿಖೆ ನಡೆಸುತ್ತಿರುವಾಗ ಬಿಜೆಪಿಯವರು ಪ್ರತಿಯೊಂದರಲ್ಲೂ ರಾಜಕೀಯ ಮಾಡಲು ಹೊರಟರೆ ಈ ಪಕ್ಷವನ್ನು ಏನಂತ ಹೇಳಬೇಕು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣ ನಡೆದಾಗ ಬಿಜೆಪಿ ಸರ್ಕಾರವೇ ಇತ್ತು. ಏನು ಮಾಡಿದ್ರು ಗೊತ್ತಿದೆ. ಸುಮ್ಮನೆ ಆಧಾರ ರಹಿತವಾಗಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಎಸ್ಐಟಿ ತಂಡವು ಯಾವ ಹಸ್ತಕ್ಷೇಪ ಇಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಈ ತಂಡ ಸತ್ಯವನ್ನು ಹೊರತರಲಿದ್ದಾರೆ ಎಂಬ ವಿಶ್ವಾಸ ನಮಗೆ ಇದೆ. ಅದಕ್ಕೆ ಬಿಜೆಪಿಯ ಬೆಂಬಲ ಏನೂ ಬೇಕಾಗಿಲ್ಲ. ಎನ್ಐಎ ಏನೂ ಬೇಕಾಗಿಲ್ಲ. ನಮ್ಮ ಪೊಲೀಸ್ ಇಲಾಖೆ ತನಿಖೆ ಮಾಡಲು ಶಕ್ತವಿದೆ. ಆ ಥರ ಏನಾದರೂ ನಿಜವಾದಂತಹ ಮಾಹಿತಿಗಳು ಬಂದರೆ ಖಂಡಿತವಾಗಿಯೂ ಆಲೋಚನೆ ಮಾಡಬಹುದು. ಕೊಡೋದೆ ಇಲ್ಲ ಅಂತ ನಾನು ಹೇಳುವುದಿಲ್ಲ. ಆದರೆ ಅಂತಹ ನಿಖರ ಮಾಹಿತಿ ಬೇಕಲ್ವಾ ಎಂದರು.
ಬಿಜೆಪಿಯವರು ಧರ್ಮಸ್ಥಳದಲ್ಲಿ ಸಮಾವೇಶ ಮಾಡಿ ಅಭಿಪ್ರಾಯ ಹೇಳಲು ನಿಬರ್ಂಧ ಏನಿಲ್ಲ. ಇದು ಪ್ರಜಾಪ್ರಭುತ್ವ. ಅವರಿಗೆ ಹಕ್ಕಿದೆ. ಆದರೆ ಉದ್ದೇಶ ಮಾತ್ರ ಸರಿ ಇಲ್ಲ. ರಾಜ್ಯದ ಜನರ ಹಿತವೇ ಅದರಲ್ಲಿಲ್ಲ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.