ಜ.26ರವರೆಗೆ ಬಿಜೆಪಿಯಿಂದ ಸಂವಿಧಾನ ಸನ್ಮಾನ್ ಅಭಿಯಾನ

bjp leader s.dattatri
ಸಂವಿಧಾನ ಸನ್ಮಾನ್ ಅಭಿಯಾನದ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ
Published on

ಶಿವಮೊಗ್ಗ: ಜಿಲ್ಲಾ ಬಿಜೆಪಿಯಿಂದ ಸಂವಿಧಾನ ಸನ್ಮಾನ್ ಅಭಿಯಾನ ಆರಂಭವಾಗಿದ್ದು, 2025ರ ಜ.26ರವರೆಗೆ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ ಹೇಳಿದರು.

ರಾಜ್ಯ ಬಿಜೆಪಿ ಮಾರ್ಗದರ್ಶನದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅಭಿಯಾನ ಆಯೋಜಿಸಲಾಗಿದೆ. ಅದರ ಅಂಗವಾಗಿ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ, ಆನಂತರ ತಾಲೂಕು ಕೇಂದ್ರಗಳಲ್ಲಿಯೂ ಕಾರ್ಯಕ್ರಮ ಆಯೋಜಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಭಾಷಣ, ಚರ್ಚಾ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಭಿಯಾನದಲ್ಲಿ ಚಿಂತಕರು, ಸ್ಥಳೀಯ ಮುಖಂಡರು, ಸಹಕಾರ ಸಂಘ, ಸಂಸ್ಥೆಗಳ ಪ್ರಮುಖರು ಕೈ ಜೋಡಿಸುವರು. ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಎಂಬ ಧ್ಯೇಯದಡಿ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿಗೆ ಸ್ಪಷ್ಟ ಬಹುಮತ ಬಂದರೆ ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತಾರೆ. ಮೀಸಲಾತಿ ಕಸಿಯುತ್ತಾರೆಂದು ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಅಭಿಯಾನದ ಮೂಲಕ ನಾವು ಅದನ್ನು ಸುಳ್ಳು ಎಂದು ಸಾಬೀತು ಮಾಡುತ್ತೇವೆ. ಸಂವಿಧಾನ ರಚನೆಯಾದ ಮೇಲೆ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ. ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ತಮ್ಮ ಸ್ವಾರ್ಥಕ್ಕೆ ಅನೇಕ ಬಾರಿ ತಿದ್ದುಪಡಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 106 ಬಾರಿ ಸಂವಿಧಾನ ತಿದ್ದುಪಡಿಯಾಗಿದೆ. ಕಾಂಗ್ರೆಸೇತರ ಸರ್ಕಾರಗಳು 31 ಬಾರಿ ತಿದ್ದುಪಡಿ ಮಾಡಿವೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರ 14 ಬಾರಿ ತಿದ್ದುಪಡಿ ಮಾಡಿದ್ದರೆ ನರೇಂದ್ರ ಮೋದಿ ಸರ್ಕಾರ 8 ಬಾರಿ ಮಾತ್ರ ತಿದ್ದುಪಡಿ ಮಾಡಿದೆ ಎಂದರು.

ಭಾರತದ ಸಂವಿಧಾನ ಜಗತ್ತಿನಲ್ಲಿಯೇ ವಿಶಿಷ್ಟವಾದುದು. ಅಂಬೇಡ್ಕರ್ ಇದರ ರೂವಾರಿ. ಅಂಬೇಡ್ಕರ್‌ಗೆ ಗೌರವ ಕೊಡುವಂತಹ ಕೆಲಸವನ್ನು ಬಿಜೆಪಿ ಮಾಡುತ್ತಲೇ ಬಂದಿದೆ. ಆದ್ದರಿಂದ ಕಾಂಗ್ರೆಸ್‌ನವರು ಬಿಜೆಪಿ ಸಂವಿಧಾನ ತಿದ್ದುಪಡಿ ಮಾಡುತ್ತದೆಂಬ ಸುಳ್ಳು ಸುದ್ದಿ ಹರಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅಭಿಯಾನದ ಪ್ರಮುಖರಾದ ಸಿ.ಎಚ್.ಮಾಲತೇಶ್, ಶಿವರಾಜ್, ವಿನ್ಸಂಟ್ ರೂಡ್ರೀಗಸ್, ಮಂಗಳಾ, ಮೂರ್ತಿ, ಕೆ.ವಿ.ಅಣ್ಣಪ್ಪ, ರಾಮು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net