ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್ ಸಮರ

bjp
ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿವರಿಸುವ ಕಿರುಹೊತ್ತಿಗೆಯನ್ನು ಎಸ್.ಎನ್.ಚನ್ನಬಸಪ್ಪ ಬಿಡುಗಡೆ ಮಾಡಿದರು. ಡಿ.ಎಸ್.ಅರುಣ್, ಜಗದೀಶ್, ಅಣ್ಣಪ್ಪ, ಮಾಲತೇಶ್ ಮುಂತಾದವರಿದ್ದರು.
Published on

ಶಿವಮೊಗ್ಗ:ಬೆಲೆ ಹೆಚ್ಚಳ, ವ್ಯಾಪಕ ಭ್ರಷ್ಟಾಚಾರ ರಾಜ್ಯ ಸರ್ಕಾರದ ಸಾಧನೆಯಾಗಿದೆ. ಸ್ವತಃ ಗುತ್ತಿಗೆದಾರರಿಂದ 60 ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಖ್ಯಾತಿ ಪಡೆದ ಹೆಗ್ಗಳಿಕೆ ಈ ಸರ್ಕಾರದ್ದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಲೇವಡಿ ಮಾಡಿದರು.

ರಾಜ್ಯ ಸರ್ಕಾರದ ವೈಫಲ್ಯಗಳನ್ನು ವಿವರಿಸುವ 8 ಪುಟಗಳ ಚಾರ್ಜ್‌ಶೀಟ್‌ನ್ನು ರಾಜ್ಯ ಬಿಜೆಪಿ ಪ್ರಕಟಿಸಿದ್ದು, ಬುಧವಾರ ಸುದ್ದಿಗೋಷ್ಠಿಯಲ್ಲಿ ಇದನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಜನರ ಪಾಲಿಗೆ ಈ ವಸೂಲಿ ಸರ್ಕಾರ ಶಾಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಹಣ ಹೇಗೆ ಲೂಟಿ ಮಾಡುವುದು? ಅವರ ಜೇಬಿಗೆ ಹೇಗೆ ಕತ್ತರಿ ಹಾಕುವುದು? ಅವರನ್ನು ಹೇಗೆ ಮೋಸಗೊಳಿಸುವುದು? ಎಂಬುದನ್ನು ಈ ಸರ್ಕಾರ ಕಂಡುಕೊಂಡಿದೆ. ಇದೀಗ ಅಭಿವೃದ್ಧಿಶೂನ್ಯ ಸರ್ಕಾರದ ಚಾರ್ಜ್‌ಶೀಟ್‌ನ್ನು ಪ್ರತಿ ಮನೆಗೆ ತಲುಪಿಸಲಾಗುವುದು ಎಂದರು.

ಬಹುಮತವಿದೆ ಎಂಬ ದುರಹಂಕಾರದಿಂದ ಬೇಕಾದ ಮಸೂದೆಗಳನ್ನು ಅಂಗೀಕಾರ ಮಾಡಲಾಗುತ್ತಿದೆ. ಅದರ ವಿರುದ್ಧ ಧ್ವನಿ ಎತ್ತಿದ ಪ್ರತಿಪಕ್ಷ ಸದಸ್ಯರನ್ನು ಸದನದಿಂದ ಅಮಾನತು ಮಾಡಲಾಗಿದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಿಸಲಾಗಿದೆ ಎಂದು ಟೀಕಿಸಿದರು.

ಜನರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿ ಹಗಲು ದರೋಡೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಚಾರ್ಜ್‌ಶೀಟ್ ಬಿಡುಗಡೆಗೊಳಿಸಿ ಅದನ್ನು ಜನರಿಗೆ ತಲುಪಿಸುವ ಅಭಿಯಾನ ಆರಂಭಿಸಿದ್ದೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾ ವಕ್ತಾರ ಎಸ್.ಎಸ್.ಜ್ಯೋತಿಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಮಾಲತೇಶ್, ಶಿವರಾಜ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಮುಂತಾದವರು ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net