

ಶಿರಾ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಗುರುವಾರ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಡಿಸಿಎಂ ಗೋವಿಂದ ಕಾರಜೋಳ ಸಾಥ್ ನೀಡಿದರು. ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ಕೆ.ಮಂಜುನಾಥ್ ಈ ಸಂದರ್ಭದಲ್ಲಿ ಗೈರಾಗಿದ್ದು ಹೆಚ್ಚು ಚರ್ಚೆಗೆ ಕಾರಣವಾಯಿತು.
ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ದೇಶ ಮತ್ತು ರಾಜ್ಯದ ಜನ ಭಾರತೀಯ ಜನತಾ ಪಕ್ಷ ಗೆಲ್ಲಬೇಕು ಎಂದು ಬಯಸುತ್ತಿದ್ದಾರೆ. ದೇಶದ ಶೇ.75 ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಆಡಳಿತ ಇದೆ. ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವದ ಸರ್ಕಾರ ಇದೆ. ಕೇಂದ್ರದಲ್ಲಿ ಮೋದಿ ನಾಯಕತ್ವದ ಸರ್ಕಾರವಿದೆ ಹಾಗಾಗಿ,ಉಪಚುನಾವಣೆ ರಾಜಕೀಯದ ದಿಕ್ಕನ್ನು ಬದಲಿಸುವ ದಿಕ್ಸೂಚಿಯಾಗಲಿದೆ ಎಂದರು.
16ಕ್ಕೆ ಮತ್ತೆ ನಾಮಪತ್ರ: ಶುಭಗಳಿಗೆ ಎಂಬ ಕಾರಣಕ್ಕೆ ಬುಧವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು ಅ.16ರಂದು ಸಾವಿರಾರು ಕಾರ್ಯಕರ್ತರ ಜತೆ ಆಗಮಿಸಿ ಬಿ.ಾರಂ ಜತೆ ನಾಮಪತ್ರ ಸಲ್ಲಿಸುವುದಾಗಿ ರಾಜೇಶ್‌ಗೌಡ ತಿಳಿಸಿದರು. ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಾ.ರಾಜೇಶ್‌ಗೌಡ, ಕ್ಷೇತ್ರದ ಆರಾಧ್ಯ ದೈವ ಜುಂಜಪ್ಪನ ಸ್ಮರಣೆ ಮಾಡಿದ್ದು ವಿಶೇಷವಾಗಿತ್ತು, ಕಾಡುಗೊಲ್ಲರ ಮತ ನಂಬಿಕೊಂಡಿರುವ ಕುಂಚಿಟಿಗ ಸಮುದಾಯದ ರಾಜೇಶ್‌ಗೌಡ ಬಿಜೆಪಿಗೂ ಹೊಂದಿಕೊಳ್ಳಬೇಕಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ಮುಖಂಡ ಎಸ್.ಆರ್.ಗೌಡ ಇದ್ದರು. ಕೆಆರ್‌ಎಸ್ ಅಭ್ಯರ್ಥಿ ನಾಮಪತ್ರ: ಶಿರಾ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಓಬಳೇಶಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಇದ್ದರು.
ಮಂಜುನಾಥ್ ಬಂಡಾಯ ಅಭ್ಯರ್ಥಿ? ಉಪಚುನಾವಣೆಯಲ್ಲಿ ಟಿಕೆಟ್ ಸಿಗಲಿದೆ ಎಂದು ಮುಖಂಡರ ಭರವಸೆ ನಂಬಿದ್ದ ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್ ಪಕ್ಷದ ನಿರ್ಧಾರಕ್ಕೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗುರುವಾರ ಡಾ.ರಾಜೇಶ್‌ಗೌಡ ನಾಮಪತ್ರ ಸಲ್ಲಿಸುವಾಗ ಗೈರು ಹಾಜರಾಗಿ ಬಂಡಾಯದ ಸಂದೇಶವನ್ನು ಕ್ಷೇತ್ರದೆಲ್ಲೆಡೆ ರವಾನಿಸಿದ್ದಾರೆ. ಶುಕ್ರವಾರ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಕೂಡ ಸಲ್ಲಿಸಲು ನಿರ್ಧರಿಸಿರುವ ಮಂಜುನಾಥ್ ಕಣದಲ್ಲಿ ಉಳಿಯುವ ಬಗ್ಗೆ ಕುತೂಹಲವಿದೆ.
ಅಭ್ಯರ್ಥಿ ಇಲ್ಲದೆ ಜೆಡಿಎಸ್ ಉಮೇದುವಾರಿಕೆ: ಜೆಡಿಎಸ್ ತನ್ನ ಅಭ್ಯರ್ಥಿ ಅಮ್ಮಾಜಮ್ಮ ಅವರಿಲ್ಲದೇ ಅವರ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗೆ ಸಲ್ಲಿಸಿತು. ಮಾಜಿ ಸಚಿವ ಎಚ್.ಡಿ.ರೇವಣ್ಣ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ರಾಮು ಅವರೇ ನಾಮಪತ್ರ ಸಲ್ಲಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕರೊನಾದಿಂದ ಚೇತರಿಸಿಕೊಳ್ಳುತ್ತಿರುವ ಅಮ್ಮಾಜಮ್ಮ ಅವರು ವಿಶ್ರಾಂತಿಯಲ್ಲಿರುವ ಕಾರಣಕ್ಕೆ ಜೆಡಿಎಸ್ ಮುಖಂಡರೇ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಬಿ.ಸತ್ಯನಾರಾಯಣ ಅವರನ್ನು ನೆನೆದು ಕಣ್ಣೀರು ಹಾಕಿದರು. ನಗರದ ಹೊರವಲಯದಲ್ಲಿರುವ ಅಮ್ಮಾಜಮ್ಮ ಅವರ ಮನೆಯಿಂದ ಮಿನಿ ವಿಧಾನಸೌಧದವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಮುಖಂಡರು ನಾಮಪತ್ರ ಸಲ್ಲಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ಎಚ್. ಡಿ.ರೇವಣ್ಣ ಮಾತನಾಡಿ, ಜೆಡಿಎಸ್‌ನಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ ಆದರೆ, 130 ವರ್ಷದ ಪಕ್ಷ ಎಂದು ಹೇಳುವ ಕಾಂಗ್ರೆಸ್, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಮ್ಮ ಕಾರ್ಯಕರ್ತರನ್ನು ಸೆಳೆದು ಟಿಕೆಟ್ ನೀಡುವ ಮೂಲಕ ಬೆಳೆ ಬೇಯಿಸಿಕೊಳ್ಳಲು ಹೊರಟಿದೆ ಎಂದರು. ಹಾಸನ ಸಂಸದ ಎಚ್.ಆರ್.ಪ್ರಜ್ವಲ್, ಶಾಸಕರಾದ ಡಿ.ಸಿ.ಗೌರಿಶಂಕರ್, ತಿಪ್ಪೇಸ್ವಾಮಿ, ಎಂ.ವಿ.ವೀರಭದ್ರಯ್ಯ, ವಾಜಿ ಶಾಸಕರಾದ ಸುಧಾಕರಲಾಲ್, ಅಮ್ಮಾಜಮ್ಮ ಪುತ್ರ ಸತ್ಯಪ್ರಕಾಶ್, ಮುಖಂಡ ಸಿ.ಆರ್.ಉಮೇಶ್ ಇತರರು ಇದ್ದರು.