

ಶಿವಮೊಗ್ಗ: ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರ ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ರೈತ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಕೃಷಿ ಸಂಬಂಧಿತ ಅನೇಕ ಯೋಜನೆಗಳಿಗೆ ಎಳ್ಳು ನೀರು ಬಿಡುತ್ತಿದೆ. ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಜನವಿರೋಧಿ ಸರ್ಕಾರ ಆಗಿ ಬದಲಾಗಿದೆ ಎಂದು ಕಿಡಿಕಾರಿದರು.
ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿದೆ. ರೈತರಿಗೆ ಸಿಗುತ್ತಿದ್ದ ಅನೇಕ ಸಬ್ಸಿಡಿಗಳನ್ನು ನಿಲ್ಲಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯದ ಪಾಲು ನಾಲ್ಕು ಸಾವಿರ ರೂ. ಸ್ಥಗಿತಗೊಳಿಸಿದೆ. ಒಂದೆಡೆ ಹಾಲು ಉತ್ಪಾದಕರಿಗೆ 3 ರೂ. ಏರಿಕೆ ಮಾಡಿದ್ದರೆ, ಮತ್ತೊಂದೆಡೆ ಗ್ರಾಹಕರಿಗೆ ಪ್ರತಿ ಲೀಟರ್ ಮೇಲೆ 3 ರೂ. ಏರಿಕೆ ಮಾಡಿದೆ. ದಿನಬಳಕೆ ವಸ್ತುಗಳ ದರ ಗಗನಕ್ಕೇರಿದ್ದು ಸರ್ಕಾರದಿಂದ ಸಿಗಬೇಕಿದ್ದ ಸೌಲತ್ತುಗಳನ್ನು ನಿಲ್ಲಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ ಮಾತನಾಡಿ, ಶ್ರಮಶಕ್ತಿ ಯೋಜನೆ ಜೀವನ್ ಜ್ಯೋತಿ ವಿಮಾ ಯೋಜನೆ, ರೈತ ಉತ್ಪಾದಕ ಸಂಸ್ಥೆ ರೈತ ಸಂಪದ ಯೋಜನೆ, ಸಹಸ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆ, ಮೀನುಗಾರರಿಗೆ ವಸತಿ ಸೌಲಭ್ಯ, ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಕ್ಲಸ್ಟರ್ ನಿರ್ಮಿಸುವ ಯೋಜನೆ, ಕನಿಷ್ಠ ಬೆಂಬಲ ಬೆಲೆ ನೀಡುವ ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಈ ಸರ್ಕಾರ ಕೈಬಿಟ್ಟಿದ್ದು, ರೈತಾಪಿ ವರ್ಗವನ್ನು ನಿರ್ಲಕ್ಷಿಸಿದೆ. ರೈತ ವಿರೋಧಿ ನೀತಿಗಳನ್ನು ಇನ್ಮುಂದೆ ಸರಿಪಡಿಸಿಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಸರ್ಕಾರ ನಂದಿನಿ ದರ ಏಕಾಏಕಿ ಹೆಚ್ಚಳ ಮಾಡಿದ್ದು, ಆ ದರವನ್ನು ಉತ್ಪಾದಕರಿಗೆ ತಕ್ಷಣ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅವರಿಗೂ ನೀಡಿಲ್ಲ. ಗ್ರಾಹಕರಿಗೂ ಮೋಸ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರರ ಪಠ್ಯವನ್ನು ಕಿತ್ತುಬಿಸಾಕುತ್ತೇವೆ ಎಂದು ಹೇಳಿದ ಮಂತ್ರಿ ಕೂಡ ಈ ಬಗ್ಗೆ ಸುಮ್ಮನಿದ್ದಾರೆ ಎಂದು ದೂರಿದರು.
ಶಾಸಕ ಡಿ.ಎಸ್.ಅರುಣ್, ಪ್ರಧಾನ ಕಾರ್ಯದರ್ಶಿ ಕೃಷ್ಣೋಜಿರಾವ್, ವಿನ್ಸೆಂಟ್ ರೋಡ್ರಿಗಸ್, ಜಿಲ್ಲಾ ಪ್ರಭಾರಿ ಬಿ.ಇ. ವಿರೂಪಾಕ್ಷಪ್ಪ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಪ್ರಮುಖರಾದ ಶಿವರಾಜ್, ಎಸ್.ಎಸ್.ಜ್ಯೋತಿಪ್ರಕಾಶ್, ವೀರಭದ್ರಪ್ಪ ಪೂಜಾರಿ, ದಿನೇಶ್ ಬುಳ್ಳಾಪುರ, ತಮ್ಮಡಿಹಳ್ಳಿ ನಾಗರಾಜ್, ರತ್ನಾಕರ್ ಶಣೈ, ಸುನೀತಾ ಅಣ್ಣಪ್ಪ, ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.