ರಾಹುಲ್‌ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

BJP Yuva Morcha workers protest Mandya
Published on

ಮಂಡ್ಯ: ದೇಶದ್ರೋಹಿ ಹೇಳಿಕೆ ನೀಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಾಹುಲ್‌ಗಾಂದಿ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಬಳಿಕ ರಾಹುಲ್‌ಗಾಂಧಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ಉದ್ಘಾಟನೇ ವೇಳೆ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ಬಗ್ಗೆ ದೇಶ ದ್ರೋಹಿ ಹೇಳಿಕೆ ನೀಡಿದ್ದಾರೆ. ಭಾರತದ ವಿರುದ್ಧ ಹೋರಾಡುವ ಹೇಳಿಕೆ ನೀಡಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಭಾರತ ವಿರೋಧಿ ನಿಲುವು ಕಾಂಗ್ರೆಸ್ ರಕ್ತದಲ್ಲೇ ಇದೆ. ಕಾಂಗ್ರೆಸ್ಸಿನ ನರನಾಡಿಗಳಲ್ಲೂ ದೇಶ ವಿರೋಧಿ ಚಿಂತನೆಯೇ ಹರಿದಾಡುತ್ತಿದೆ. ಅಂದು ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಕಾಂಗ್ರೆಸ್ ಪಕ್ಷ ನೆಹರೂ ಕಾಲದಿಂದ ಹಿಡಿದು ಇಂದಿನ ರಾಹುಲ್ ಕಾಲದವರೆಗೂ ಪರಕೀಯರ ಪರವಾಗಿಯೇ ಇದೆ ಎಂದು ಆರೋಪಿಸಿದರು.

ಇಂದಿಗೂ ಕಾಂಗ್ರೆಸ್ಸಿನ ಹಿಡಿತ ಇಟಲಿ ಮಾತೆಯ ಕೈಯಲ್ಲಿದೆ. ಭಾರತವನ್ನು ತನ್ನ ಆತ್ಮ ಎಂದು ಕಾಂಗ್ರೆಸ್ ಅಪ್ಪಿತಪ್ಪಿಯೂ ಹೇಳುವುದಿಲ್ಲ. ಕಾಂಗ್ರೆಸ್ ಮಾನಸಿಕತೆಯೇ ಭಾರತ ವಿರೋಧಿಯಾಗಿದೆ. ಕಾಂಗ್ರೆಸ್ ಈ ದೇಶಕ್ಕೆ ಕ್ಯಾನ್ಸರ್ ಇದ್ದಂತೆ. ಆ ಪಕ್ಷ ಇದ್ದಷ್ಟು ದಿನವೂ ದೇಶವನ್ನು ಕಾಡುತ್ತಲೇ ಇರುತ್ತದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಬಗ್ಗೆ ಮಾತನಾಡವ ನೈತಿಕ ಹಕ್ಕು ರಾಹುಲ್ ಗಾಂಧಿ ಅವರಿಗಿಲ್ಲ. ಇಂತಹ ಹೇಳಿಕೆ ನೀಡಿರುವ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ.ರಘುಗೌಡ, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಸವ್ಯಸಾಚಿ, ನಾಗಮಂಗಲ ಆನಂದ್, ಪ್ರೀತಂ, ಅಪ್ಪು, ವರದರಾಜು, ಸುರೇಶ, ನವೀನ, ಪ್ರೇಮ್, ನಿತಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net