

ಮಂಗಳೂರು : ರಾಹುಲ್ ಗಾಂಧಿ ವರ್ತನೆಯಲ್ಲಿ ಇಡೀ ದೇಶವನ್ನೇ ಗೆದ್ದಿದ್ದೇನೆ ಎಂಬ ಭಾವನೆ ಇದೆ. ಅವರು ಸಂಸತ್‌ನಲ್ಲಿ ನೀಡಿದ ಹಿಂದು ವಿರೋಧಿ ಹೇಳಿಕೆ ಕಾಂಗ್ರೆಸ್ ಪಾರ್ಟಿಯ ಮಾನಸಿಕ ದಾರಿದ್ರೃದ ದ್ಯೋತಕವಾಗಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಸಂಸತ್‌ನಲ್ಲಿ ರಾಹುಲ್ ಗಾಂಧಿ ಹಿಂದು ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ
ಕಾರ್ಯಕರ್ತರು ಸೋಮವಾರ ಕಾವೂರಿನಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹಿಂದೂಗಳು ಹಿಂಸೆ ಮಾಡುವವರು, ಅಸಹಿಷ್ಣುಗಳು ಎಂದು ಆರೋಪಿಸಿದಾಗಲೇ ಅವರ ಹಿಂದೂ ದ್ವೇಷಿ ಮನಸ್ಸಿನ ಇಂಗಿತ ಬಹಿರಂಗವಾಗಿದೆ. ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ಜಾಗೃತವಾಗಿರಬೇಕಾದ ಅಗತ್ಯವಿದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ರಾಹುಲ್ ಗಾಂಧಿಯ ಅಪ್ರಬುದ್ದ ಹೇಳಿಕೆಯನ್ನು ಖಂಡಿಸುವ ಬದಲು ರಾಜ್ಯ
ಕಾಂಗ್ರೆಸ್ ನಾಯಕರೂ ಅದಕ್ಕೆ ಸೊಪ್ಪು ಹಾಕಿರುವುದು ಅತ್ಯಂತ ನಾಚಿಕೆಗೇಡು. ತನ್ಮೂಲಕ ಇಡೀ ಕಾಂಗ್ರೆಸ್ ತಾನು ಬಹಿರಂಗವಾಗಿ ಹಿಂದೂ ವಿರೋಧಿ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ತಕ್ಷಣ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರು ಹಿಂದೂ ಸಮಾಜದ ಕ್ಷಮೆ ಯಾಚಿಸಿ ಪಾಪ ಕಳೆದುಕೊಳ್ಳಲಿ ಎಂದು ಆಗ್ರಹಿಸಿದರು.
ಶಾಸಕ ಡಾ. ವೈ, ಭರತ್ ಶೆಟ್ಟಿ ಮಾತನಾಡಿ ರಾಹುಲ್ ಗಾಂಧಿ ಹುಚ್ಚರಂತೆ ವರ್ತಿಸುತ್ತಿದ್ದಾರೆ. ಹಿಂದೂಗಳನ್ನು ಕಂಡಾಗ
ದ್ವೇಷಿಸತೊಡಗುತ್ತಾರೆ. ಲೋಕಸಭೆಯಲ್ಲಿ ಹಿಂದೂಗಳ ವಿರುದ್ಧ ಮಾತನಾಡುತ್ತಿರುವ ಈತನ ಕೆನ್ನೆಗೆ ನಾಲ್ಕೇಟು ಬಾರಿಸಿ ಬುದ್ದಿ ಹೇಳುವ ಸಮಯ ಬಂದಿದೆ ಎಂದರು.
ಹಿಂದೂ ಧರ್ಮದ ಅವಹೇಳನದ ವಿರುದ್ದ ಪೇಜಾವರ ಶ್ರೀಗಳು ಧ್ವನಿ ಎತ್ತಿದ್ದಾರೆ. ರಾಜಕೀಯದಲ್ಲಿ ಮೂಗು ತೂರಿಸಬೇಡಿ ಎಂದು ಹೇಳುವ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಧರ್ಮದಲ್ಲಿ ಮೂಗು ತೂರಿಸಿದ್ದೇಕೆ ಎಂದು ಪ್ರಶ್ನಿಸಲಿ ಎಂದರು
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಕಿಶೋರ್ ಕುಮಾರ್ ಬೊಟ್ಯಾಡಿ, ಯತೀಶ್ ಆರ‌್ವಾರ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ , ವಿಕಾಸ್ ಪುತ್ತೂರು , ಭರತರಾಜ್ ಕೃಷ್ಣಾಪುರ,ರಾಜೇಶ್ ಕೊಟ್ಟಾರಿ, ರಕ್ಷಿತ್ ಆರ್. ಪೂಜಾರಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.