

ಉಡುಪಿ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ದಿನದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರವಾಗಿ ಸುಳ್ಳು ಕೇಸುಗಳನ್ನು ದಾಖಲಿಸಿ, ದೌರ್ಜನ್ಯ ಎಸಗುತ್ತಿದೆ. ಕಾರ್ಯಕರ್ತರ ರಕ್ಷಣೆಗೆ ಬಂದ ಬೆಳ್ತಂಗಡಿ ಶಾಸಕರ ಮೇಲೆ ಸುಳ್ಳು ಕೇಸ್ ದಾಖಲಿಸಿ ಬಂಧಿಸುವ ಹುನ್ನಾರ ನಡೆಸಿದ್ದು, ಈ ಬಗ್ಗೆ ಯುವಮೋರ್ಚಾ ರಸ್ತೆಗಿಳಿದು ಹೋರಾಟ ಮಾಡಲಿದೆ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಹೇಳಿದರು.
ಅಜ್ಜರಕಾಡು ಹುತಾತ್ಮಯೋಧರ ಸ್ಮಾರಕ ಬಳಿ ಗುರುವಾರ ಜಿಲ್ಲಾ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬಂಧನ ಹುನ್ನಾರ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಮಾತನಾಡಿ, ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ 100 ಮೀಟರ್ ರಸ್ತೆಮಾಡದ ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ಶೆಣೈ, ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ಉಪಾಧ್ಯಕ್ಷ ಸಚಿನ್, ಪ್ರಸಾದ್ ಬಿಲ್ಲವ, ಅರ್ಜುನ್ ಪ್ರಭು, ಯುವಮೋರ್ಚಾ ಮಂಡಲ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ, ಗಜೇಂದ್ರ ಎಸ್.,ಬಿ., ಸೋನು ಪೂಜಾರಿ ಪಾಂಗಳ, ಶ್ರೀವತ್ಸ ಉಡುಪಿ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರದಿಪ್ ಕುಂದರ್, ಪ್ರವಿಣ್ ಸೋಮಯ್ಯ, ಮಹಿಳಾ ಮೋರ್ಚಾ ಪ್ರಮುಖರಾದ ನಳಿನಿ ಪ್ರದಿಪ್, ಮಹಿಳಾಮೋರ್ಚಾ ಅಧ್ಯಕ್ಷೆ ಅಶ್ವಿನಿ ಶೆಟ್ಟಿ, ಉಡುಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.